ಜಮ್ಮು: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಇಂದು ಶಸ್ತ್ರಸಜ್ಜಿತ ಉಗ್ರರು ಎರಡು ಸೇನಾ ವಾಹನಗಳ ಮೇಲೆ ದಾಳಿ ನಡೆಸಿದ್ದು ಮೂವರು ಸೈನಿಕರು ಹುತಾತ್ಮರಾಗಿದ್ದಾರೆ. ಇನ್ನುಳಿದಂತೆ ಮೂವರು ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
ಕಾರ್ಡನ್ ಆ್ಯಂಡ್ ಸರ್ಚ್ ಸಿಬ್ಬಂದಿಯನ್ನು ಸ್ಥಳಕ್ಕೆ ಹೊತ್ತೊಯ್ಯುತ್ತಿದ್ದ ವಾಹನಗಳ ಮೇಲೆ ಸುರನ್‌ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ಧೇರಾ ಕಿ ಗಲಿ ಮತ್ತು ಬುಫ್ಲಿಯಾಜ್ ನಡುವಿನ ಧಾತ್ಯಾರ್ ಮೋರ್‌ನಲ್ಲಿ ಮಧ್ಯಾಹ್ನ 3.45ರ ಸುಮಾರಿಗೆ ದಾಳಿ ನಡೆದಿದೆ. ಉಗ್ರರು ಅಡಗಿರುವ ಬಗ್ಗೆ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಬುಧವಾರ ರಾತ್ರಿ ಪೂಂಚ್‌ನ ಧೇರಾ ಕಿ ಗಲಿ ಪ್ರದೇಶದಲ್ಲಿ ಜಂಟಿ ಶೋಧ ಕಾರ್ಯಾಚರಣೆ ಪ್ರಾರಂಭಿಸಲಾಗಿತ್ತು.
ಹೆಚ್ಚುವರಿ ಪಡೆಗಳು ಸ್ಥಳಕ್ಕೆ ತೆರಳುತ್ತಿದ್ದಂತೆ ಉಗ್ರರು ಟ್ರಕ್ ಮತ್ತು ಜಿಪ್ಸಿ ವಾಹನಗಳ ಮೇಲೆ ಗುಂಡು ಹಾರಿಸಿದ್ದಾರೆ. ಈ ವೇಳೆ ಮೂವರು ಸೈನಿಕರು ಮೃತಪಟ್ಟಿದ್ದು ಮತ್ತೆ ಮೂವರು ಗಂಭೀರವಾಗಿ ಗಾಯಗೊಂಡರು ಎಂದು ತಿಳಿದುಬಂದಿದೆ. ದಾಳಿ ನಡೆದ ಸ್ಥಳದಲ್ಲಿ ಸೇನಾ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ. ಬೃಹತ್ ಪ್ರಮಾಣದ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆ ನಡೆಸಲಾಗುತ್ತಿದೆ.