ಲಡಾಖ್(ಜಮ್ಮು ಕಾಶ್ಮೀರ):ಭಯೋತ್ಪಾದನೆ ಹೆಚ್ಚಳ ಮತ್ತು ಸಾಮಾಜಿಕ-ಆರ್ಥಿಕ ಅಭಿವೃದ್ಧಿಯಲ್ಲಿನ ಕೊರತೆಯಿಂದಾಗಿ ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿಸಲು ಮುಖ್ಯ ಕಾರಣ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಮೂರು ದಿನಗಳ ಲಡಾಖ್ ಪ್ರವಾಸದಲ್ಲಿರುವ ಸಚಿವರು, ಇಂದು ಲೇಹ್‌ಗೆ ಭೇಟಿ ವೇಳೆ ಗಡಿ ರಸ್ತೆ ಸಂಸ್ಥೆ(ಬಿಆರ್‌ಒ) ನಿರ್ಮಾಣ ಮಾಡಿರುವ 63 ಯೋಜನೆಗಳನ್ನು ಲೋಕಾರ್ಪಣೆ ಮಾಡಿದರು. ದೇಶದಲ್ಲಿನ ಹಲವು ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಲು ಬಿಆರ್‌ಒ ಪ್ರಮುಖ ಪಾತ್ರ ವಹಿಸಿದೆ. ದೇಶದ ಅಭಿವೃದ್ಧಿಯಲ್ಲಿ ಸಂಪರ್ಕ ಹೆಚ್ಚಿನ ಪ್ರಾಮುಖ್ಯತೆ ವಹಿಸಿದೆ ಎಂದರು.
ಭಯೋತ್ಪಾದನೆ, ಸಾಮಾಜಿಕ - ಆರ್ಥಿಕ ಕೊರತೆಯೂ ಸೇರಿದಂತೆ ಹಲವು ಪ್ರಮುಖ ವಿಚಾರಗಳಿಂದ ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಲಾಗಿದೆ. ಯುಟಿಯನ್ನಾಗಿ ಘೋಷಿಸಿದ ಬಳಿಕ ಈ ಪ್ರದೇಶದಲ್ಲಿ ಉಗ್ರ ಚಟುವಟಿಕೆಗಳು ಕಡಿಮೆಯಾಗಿವೆ. ಬಂಡವಾಳ ಹೂಡಿಕೆ ಹಾಗೂ ಮೂಲ ಸೌಲಭ್ಯ ಕಲ್ಪಿಸಲು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ರಕ್ಷಣಾ ಸಚಿವರು ವಿವರಣೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಶೀಘ್ರದಲ್ಲಿ ಲಡಾಖ್‌ನ ರಾಜಕೀಯ ನಾಯಕರ ಸಭೆ ಕರೆಯಲಿದ್ದು, ಇಲ್ಲಿ ಚುನಾವಣೆ ನಡೆಸುವ ಸಂಬಂಧ ಮಾತುಕತೆ ನಡೆಸಲಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ನಲ್ಲಿ ರಾಜಕೀಯ ಪ್ರಕ್ರಿಯೆಗಳು ಆರಂಭಿಸಬೇಕು ಎಂಬುದು ಪ್ರಧಾನಿ ಮೋದಿ ಅವರ ಆಶಯವಾಗಿದೆ. ಜಮ್ಮು-ಕಾಶ್ಮೀರದ ರಾಜಕಾರಣಿಗಳ ಜೊತೆ ಈಗಾಗಲೇ ಮಾತುಕತೆ ನಡೆಸಿದ್ದಾರೆ. ಶೀಘ್ರದಲ್ಲೇ ಲಡಾಖ್‌ನ ರಾಜಕೀಯ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ.