ನವದೆಹಲಿ: 26/11ರ ಮುಂಬೈ ಭಯೋತ್ಪಾದಕ ದಾಳಿಯ ವಾರ್ಷಿಕೋತ್ಸವದಂದು ಮನ್ ಕಿ ಬಾತ್ ರೇಡಿಯೊ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತವು ಈ ದಿನದಂದು ಅತ್ಯಂತ ಘೋರ ದಾಳಿಯನ್ನು ಎದುರಿಸಿತ್ತು. ಆದರೆ ಆ ದಾಳಿಯಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದೆ ಮತ್ತು ಭಯೋತ್ಪಾದನೆಯನ್ನು ತನ್ನ ಎಲ್ಲಾ ಸಾಮರ್ಥ್ಯದಿಂದ ಹತ್ತಿಕ್ಕುತ್ತಿದೆ ಎಂದು ಹೇಳಿದರು.
ಮುಂಬೈ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಎಲ್ಲರಿಗೂ ಗೌರವ ನಮನ ಸಲ್ಲಿಸಿದ ಪ್ರಧಾನಿ ದೇಶವು ಧೈರ್ಯಶಾಲಿ ಹುತಾತ್ಮರನ್ನು ನೆನಪಿಸಿಕೊಳ್ಳುತ್ತಿದೆ ಎಂದು ಹೇಳಿದರು. ನವೆಂಬರ್ 26ನೇ ದಿನಾಂಕವನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ. ಈ ದಿನ ದೇಶದಲ್ಲಿ ಅತ್ಯಂತ ಘೋರ ಭಯೋತ್ಪಾದಕ ದಾಳಿ ನಡೆಯಿತ್ತು. ಭಯೋತ್ಪಾದಕರು ಮುಂಬೈ ಮತ್ತು ಇಡೀ ದೇಶವನ್ನು ಬೆಚ್ಚಿಬೀಳಿಸಿದ್ದರು. ಆದರೆ, ನಾವು ಆ ದಾಳಿಯಿಂದ ಚೇತರಿಸಿಕೊಂಡಿದ್ದೇವೆ ಮತ್ತು ಈಗ ನಾವು ಭಯೋತ್ಪಾದನೆಯನ್ನು ಪೂರ್ಣ ಶಕ್ತಿಯಿಂದ ಹತ್ತಿಕ್ಕುತ್ತಿದ್ದೇವೆ ಎಂದು ಅವರು ಪ್ರತಿಪಾದಿಸಿದರು.
ನವೆಂಬರ್ 26, 2008 ರಂದು ಪಾಕಿಸ್ತಾನದಿಂದ ಸಮುದ್ರ ಮಾರ್ಗದ ಮೂಲಕ ಭಾರತದೊಳಕ್ಕೆ ನುಸುಳಿದ್ದ 10 ಜನ ಲಷ್ಕರ್-ಎ-ತೈಬಾ ಭಯೋತ್ಪಾದಕರು ಮುಂಬೈನ ಹಲವಾರು ಪ್ರದೇಶಗಳ ಮೇಲೆ ಗುಂಡಿನ ದಾಳಿ ನಡೆಸಿದ್ದರು. 60 ಗಂಟೆಗಳ ಕಾಲ ಭಯೋತ್ಪಾದಕರ ಅಟ್ಟಹಾಸಕ್ಕೆ 18 ಭದ್ರತಾ ಸಿಬ್ಬಂದಿ ಸೇರಿದಂತೆ 166 ಜನ ಸಾವಿಗೀಡಾಗಿ ಮತ್ತು ಹಲವಾರು ಜನರು ಗಾಯಗೊಂಡಿದ್ದರು. 1949ರಲ್ಲಿ ಸಂವಿಧಾನ ಸಭೆಯು ಈ ದಿನದಂದು ಭಾರತದ ಸಂವಿಧಾನವನ್ನು ಅಂಗೀಕರಿಸಿದ್ದರಿಂದ ನವೆಂಬರ್ 26 ಆ ಕಾರಣಕ್ಕಾಗಿಯೂ ಭಾರತದ ಪಾಲಿಗೆ ಮುಖ್ಯ ದಿನವಾಗಿದೆ ಎಂದು ಪ್ರಧಾನಿ ತಿಳಿಸಿದರು.