ನವದೆಹಲಿ: ಕಣಿವೆ ನಾಡು ಜಮ್ಮು-ಕಾಶ್ಮೀರದ ವಿವಿಧ ಪ್ರದೇಶಗಳಲ್ಲಿ ಕಳೆದ ಕೆಲ ದಿನಗಳಿಂದ ಉಗ್ರ ಚಟುವಟಿಕೆ ಹೆಚ್ಚಾಗಿದ್ದು, ಭಾರತೀಯ ಯೋಧರು, ಪೊಲೀಸ್ ಹಾಗೂ ಎನ್ಐಎ ಅವರ ಹೆಡೆಮುರಿ ಕಟ್ಟುವ ಕೆಲಸ ಮಾಡ್ತಿದೆ. ಸದ್ಯ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಜಮ್ಮು-ಕಾಶ್ಮೀರದ ವಿವಿಧ ಪ್ರದೇಶಗಳಲ್ಲಿ ಶೋಧ ಕಾರ್ಯ ನಡೆಸಿ ಐವರು ಉಗ್ರರ ಸಹಚರರ ಬಂಧನ ಮಾಡಿದೆ.
ಜಮ್ಮು- ಕಾಶ್ಮೀರದ ಶ್ರೀನಗರ, ಪುಲ್ವಾಮಾ ಮತ್ತು ಶೋಪಿಯಾನ್ ಜಿಲ್ಲೆಗಳಲ್ಲಿ ಶೋಧಕಾರ್ಯ ನಡೆಸಿದ ವೇಳೆ ಹನೀಫ್, ಹಫೀಜ್, ಓವೈಸ್ ದಾರ್, ಮತೀನ್ ಭಟ್ ಮತ್ತು ಆರಿಫ್ ಫಾರೂಕ್ ಭಟ್ನನ್ನ ಬಂಧನ ಮಾಡಲಾಗಿದೆ. ಇವರೆಲ್ಲರೂ ಲಷ್ಕರಿ-ಇ-ತೊಯ್ಬಾ, ಜೈಶ್-ಇ-ಮೊಹ್ಮದ್,ಹಿಜ್ಬಾ ಉಲ್ ಮುಜಾಹಿದ್ದೀನ್, ಅಲ್ ಬದ್ರಾ ಸೇರಿದಂತೆ ಅನೇಕ ಉಗ್ರ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿದ್ದರು.