ಇಂದೋರ್ (ಮಧ್ಯಪ್ರದೇಶ): ಮಧ್ಯಪ್ರದೇಶದ ಇಂದೋರ್‌ನಲ್ಲಿ ಶಂಕಿತ ಭಯೋತ್ಪಾದಕ ಸರ್ಫರಾಜ್ ಮೆನನ್ ಎಂಬಾತನನ್ನು ಬಂಧಿಸಲಾಗಿದೆ. ಪೊಲೀಸ್ ವಿಚಾರಣೆಯಲ್ಲಿ ಈತನ ಕುರಿತ ಹಲವು ಆಘಾತಕಾರಿ ವಿಚಾರಗಳು ಹೊರಬಂದಿವೆ. ಹಾಂಕಾಂಗ್ ಪಾಸ್‌ಪೋರ್ಟ್ ಹೊಂದಿರುವ ಈತ ನಾಲ್ಕು ಮದುವೆ ಮಾಡಿಕೊಂಡಿದ್ದಾನೆ.
ಇದನ್ನೂ ಓದಿ:ಐಎಸ್ಡಿ-ಎನ್‌ಐಎ ಭರ್ಜರಿ ಕಾರ್ಯಾಚರಣೆ.. ಅಲ್ ಖೈದಾ ಜೊತೆ ನಂಟು, ಬೆಂಗಳೂರಿನಲ್ಲಿ ಶಂಕಿತ ಅರೆಸ್ಟ್
ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಮತ್ತು ಮುಂಬೈ ಪೊಲೀಸರ ಮಾಹಿತಿ ಮೇರೆಗೆ ಸೋಮವಾರ ರಾತ್ರಿ ಮಧ್ಯಪ್ರದೇಶದ ಭಯೋತ್ಪಾದನೆ ನಿಗ್ರಹ ದಳದ (ಎಟಿಎಸ್) ಪೊಲೀಸರ ಬಲೆಗೆ ಸರ್ಫರಾಜ್ ಬಿದ್ದಿದ್ದಾನೆ. ಈತನ ಬಳಿ ಸಿಕ್ಕಿರುವ ಪಾಸ್‌ಪೋರ್ಟ್‌ನಲ್ಲಿ ಚೀನಾ ಮತ್ತು ಹಾಂಕಾಂಗ್‌ನಲ್ಲಿ ಸುತ್ತಿ ವಲಸೆ ಬಂದಿರುವುದು ಗೊತ್ತಾಗಿದೆ. ಮತ್ತೊಂದು ಅಚ್ಚರಿಯ ಅಂಶ ಎಂದರೆ, ಭಾರತ ಮಾತ್ರವಲ್ಲದೇ ಚೀನಾ, ಹಾಂಕಾಂಗ್ ಸೇರಿದಂತೆ ವಿವಿಧೆಡೆ ನಾಲ್ಕು ಮದುವೆಯಾಗಿದ್ದಾನೆ. ಹಿಂದಿ, ಇಂಗ್ಲಿಷ್ ಹೊರತಾಗಿ ಚೈನೀಸ್ ಕೂಡ ಈತ ಮಾತನಾಡಬಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಓದು ಕೇವಲ 5ನೇ ತರಗತಿ: ಉಗ್ರ ಸರ್ಫರಾಜ್ ಕೇವಲ ಐದನೇ ತರಗತಿಯವರೆಗೆ ಓದಿದ್ದಾನೆ. ಆದರೆ, ಈತನ ಹಿನ್ನೆಲೆ ಕ್ರಿಮಿನಲ್ ಕೃತ್ಯದಿಂದ ಕೂಡಿದೆ. ಕೌಟುಂಬಿಕ ಹಿನ್ನೆಲೆಯ ಹೊರತಾಗಿ ಬೇರೆ ಬೇರೆ ರಾಷ್ಟ್ರಗಳಲ್ಲಿ ನೆಲೆಸಿರುವ ಈತನ ಪತ್ನಿಯರ ಬಗ್ಗೆಯೂ ಎಟಿಎಸ್ ತಂಡ ತನಿಖೆ ನಡೆಸುತ್ತಿದೆ. ಈ ವೇಳೆ ಚೀನಾದಲ್ಲಿ ನಡೆದ ತನ್ನ ಮದುವೆ ಮುರಿದು ಬಿದ್ದಿದೆ. ಈ ಬಗ್ಗೆ ಇ-ಮೇಲ್ವೊಂದನ್ನು ಎನ್‌ಐಎಗೆ ಕಳುಹಿಸಲಾಗಿದೆ ಎಂದು ಆರೋಪಿ ಹೇಳಿಕೊಂಡಿದ್ದಾನೆ. ಆದ್ದರಿಂದ ಇ-ಮೇಲ್‌ಗಳ ಬಗ್ಗೆಯೂ ತನಿಖೆ ನಡೆಸಲಾಗುತ್ತದೆ. ಎನ್‌ಐಎ ಮತ್ತಷ್ಟು ಮಾಹಿತಿ ಸಂಗ್ರಹಿಸುತ್ತಿದ್ದು, ಗುಪ್ತಚರದಿಂದ ಪಡೆದ ಸಾಕ್ಷ್ಯಗಳನ್ನು ಸಹ ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.