ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಪ್ರತಿಪಕ್ಷದ ಮೈತ್ರಿಕೂಟದ ಇಂಡಿಯನ್ ನ್ಯಾಷನಲ್ ಡೆವಲಪ್‌ಮೆಂಟ್ ಇನ್‌ಕ್ಲೂಸಿವ್ ಅಲೈಯನ್ಸ್ (INDIA) ಎಂಬ ಹೆಸರು ಇಟ್ಟುಕೊಂಡ ಬಗ್ಗೆ ಪ್ರತಿಪಕ್ಷ ನಾಯಕರಿಗೆ ತಿರುಗೇಟು ನೀಡಿದ್ದಾರೆ. ಮಂಗಳವಾರ ಇಲ್ಲಿ ನಡೆದ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಅವರು ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ.
ಇದೊಂದು ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಹುಟ್ಟಿಕೊಂಡ ಮೈತ್ರಿಕೂಟ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹಾಗೂ ಇಂಡಿಯನ್ ಮುಜಾಹಿದ್ದೀನ್ ಸೇರಿದಂತೆ ಹಲವು ಭಯೋತ್ಪಾದನಾ ಸಂಘಟನೆಗಳಲ್ಲಿಯೂ ಇದೇ ಇಂಡಿಯಾ ಎಂಬ ಹೆಸರಿದೆ ಎಂದು ಪ್ರಧಾನಿ ಮೋದಿ ಪ್ರತಿಪಕ್ಷ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ.
ಈಸ್ಟ್ ಇಂಡಿಯಾ ಕಂಪನಿ ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸೇರಿ ಮುಂತಾದ ಹೆಸರುಗಳನ್ನು ಕೈಬಿಟ್ಟು ದೇಶದ ಹೆಸರನ್ನಷ್ಟೇ ಇಟ್ಟುಕೊಳ್ಳುವುದರಿಂದ ಜನರನ್ನು ವಂಚಿಸಲು ಸಾಧ್ಯವಿಲ್ಲ. 2024ರ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನನಾ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.
ಪ್ರಧಾನಿ ಮೋದಿ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಬಿಜೆಪಿ ಸಂಸದ ರವಿಶಂಕರ್ ಪ್ರಸಾದ್ ಕೂಡ ನೂತನ ಮೈತ್ರಿಕೂಟ INDIA ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಭೆ ಮುಗಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಮುಂದೆ ಹೇಳಿಕೆ ನೀಡಿರುವ ಪ್ರಸಾದ್, ಈ ರೀತಿಯ ಗೊತ್ತುಗುರಿಯಿಲ್ಲದ ಮತ್ತು ದಿಕ್ಕುದೆಸೆಯಿಲ್ಲದಿರುವ ಪ್ರತಿಪಕ್ಷಗಳನ್ನು ನಾನು ನನ್ನ ರಾಜಕೀಯ ಜೀವನದಲ್ಲಿ ಈವರೆಗೂ ನೋಡಿರಲಿಲ್ಲ ಎಂದು ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಪ್ರಧಾನಿ ಮೋದಿ ಪ್ರಸ್ತಾಪ ಮಾಡಿರುವುದಾಗಿ ಅವರು ಹೇಳಿದ್ದಾರೆ.
ಇಂಡಿಯಾ ಎಂಬ ಹೊಸ ಹೆಸರು ನಾಮಕಾರಣ ಮಾಡಿಕೊಂಡ ಪ್ರತಿಪಕ್ಷಗಳು ತಮ್ಮನ್ನು ತಾವು ಹೊಗಳಿಕೊಳ್ಳುತ್ತಲೇ ಇರುತ್ತಾರೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಈಸ್ಟ್ ಇಂಡಿಯಾ ಕಂಪನಿ, ಇಂಡಿಯನ್ ಮುಜಾಹಿದೀನ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ.. ಇವುಗಳಲ್ಲೆಲ್ಲ ಇಂಡಿಯಾ ಎಂಬ ಹೆಸರಿದೆ. ಇದೊಂದು ಚುನಾವಣೆ ಗಿಮಿಕ್ ಅಷ್ಟೇ. ಈ ಹೆಸರನ್ನು ಬಳಸುವುದರಿಂದ ಏನೂ ಆಗುವುದಿಲ್ಲ. ಕೇವಲ ದೇಶದ ಹೆಸರನ್ನು ಬಳಸಿಕೊಂಡು ಜನರನ್ನು ದಾರಿತಪ್ಪಿಸಲು ಸಾಧ್ಯವಿಲ್ಲವೆಂದು ಪ್ರಧಾನಿ ಮೋದಿ ಹೇಳಿದ್ದಾರೆ. ನಮ್ಮ ಪ್ರಧಾನಿಯ ಬಗ್ಗೆ ನಮಗೆ ಹೆಮ್ಮೆ ಇದೆ. 2024 ರಲ್ಲಿ ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಈ ರೀತಿಯ ಗಿಮಿಕ್ಗಳು ಪ್ರಜ್ಞಾವಂತ ಪ್ರಜೆಗಳ ಮುಂದೆ ಕೆಲಸ ಮಾಡುವುದಿಲ್ಲ ಎಂದು ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.
ಪ್ರತಿಪಕ್ಷಗಳ ಮೈತ್ರಿಕೂಟದ 'ಇಂಡಿಯಾ' ಹೆಸರಿನ ಕುರಿತು ಪ್ರಧಾನಿ ನರೇಂದ್ರ ಮೋದಿಯವರ ಕಾಮೆಂಟ್‌ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, 'ಮಿಸ್ಟರ್ ಮೋದಿ, ನೀವು ನಮ್ಮನ್ನು ಏನು ಬೇಕಾದರೂ ಕರೆಯಿರಿ. ನಮ್ಮದು 'ಭಾರತ'. ಸಂಘರ್ಷದಿಂದ ಹೊತ್ತು ಉರಿಯುತ್ತಿರುವ ಮಣಿಪುರವನ್ನು ನಾವು ಹೊರಗೆ ತರಲು ಸಹಾಯ ಮಾಡುತ್ತೇವೆ. ಪ್ರತಿ ಮಹಿಳೆ ಮತ್ತು ಮಗುವಿನ ಕಣ್ಣೀರು ಒರೆಸುತ್ತೇವೆ. ಎಲ್ಲರಿಗೂ ಪ್ರೀತಿ ಮತ್ತು ಶಾಂತಿಯನ್ನು ಮರಳಿ ನೀಡುತ್ತೇವೆ. ನಾವು ಮಣಿಪುರದಲ್ಲಿ ಇಂಡಿಯಾದ ಕಲ್ಪನೆಯನ್ನು ಮರುನಿರ್ಮಾಣ ಮಾಡುತ್ತೇವೆ ಎಂದಿದ್ದಾರೆ.
ಮಣಿಪುರದಲ್ಲಿ ನಡೆದ ಹಿಂಸಾಚಾರದ ಕುರಿತು ಪ್ರಧಾನಿ ಹೇಳಿಕೆಗೆ ಆಗ್ರಹಿಸಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳ ಧರಣಿ ಮತ್ತು ಹೋರಾಟ ನಡೆಯುತ್ತಿದೆ. ಕಾಂಗ್ರೆಸ್ ಸಂಸದ ಮನೀಶ್ ತಿವಾರಿ, ಮಣಿಪುರ ವಿಚಾರದಲ್ಲಿ ಪ್ರಧಾನಿ ಏಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಇದನ್ನು ಓದಿ:ಮಣಿಪುರ ಹಿಂಸಾಚಾರ ಕುರಿತು ಪ್ರಧಾನಿ ಮೋದಿ ಹೇಳಿಕೆಗೆ ಒತ್ತಾಯಿಸಿ ಪ್ರತಿಪಕ್ಷಗಳ ಪ್ರತಿಭಟನೆ - VIDEO