ನವದೆಹಲಿ: ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಸಾವಿನ ಕುರಿತು ಸಾಮಾಜಿಕ ಜಾಲತಾಣದಲ್ಲಿ ವದಂತಿಗಳು ಹರಿದಾಡುತ್ತಿವೆ. ಮಸೂದ್ ಅಜರ್‌ನನ್ನು ಹತ್ಯೆ ಮಾಡಲಾಗಿದೆ ಎನ್ನಲಾದ ಸ್ಫೋಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಜೆಇಎಂ ಮುಖ್ಯಸ್ಥ ಮಸೂದ್ ಅಜರ್, 2001 ರ ಭಾರತದ ಸಂಸತ್ ದಾಳಿ ಪ್ರಕರಣ ಹಾಗೂ ದೇಶದಲ್ಲಿ ನಡೆದ ಹಲವಾರು ಭಯೋತ್ಪಾದಕ ದಾಳಿಗಳಲ್ಲಿ ಮೋಸ್ಟ್ ವಾಂಟೆಡ್ ಆಗಿದ್ದಾನೆ.
ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿನ ಒಂದು ಪೋಸ್ಟ್ನಲ್ಲಿ, ಸ್ಫೋಟದ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. "ಅಪರಿಚಿತ ವ್ಯಕ್ತಿಯಿಂದ ಹೊಸ ವರ್ಷದ ಉಡುಗೊರೆ. ಬಿಗ್ ಬ್ರೇಕಿಂಗ್ ನ್ಯೂಸ್. ದೃಢೀಕರಿಸದ ವರದಿಗಳ ಪ್ರಕಾರ, ಮೋಸ್ಟ್ ವಾಂಟೆಡ್ ಟೆರರಿಸ್ಟ್, ಅಪರಿಚಿತ ವ್ಯಕ್ತಿಯೊಬ್ಬ ಬೆಳಗ್ಗೆ 5 ಗಂಟೆಗೆ ಬಾಂಬ್ ಸ್ಫೋಟಿಸುವ ಮೂಲಕ ಕಂದಹಾರ್ ಹೈಜಾಕರ್ ಮಸೂದ್ ಅಜರ್‌ನನ್ನು ಹತ್ಯೆ ಮಾಡಿದ್ದಾನೆ" ಎಂದು ಬರೆಯಲಾಗಿದೆ. ಭಯೋತ್ಪಾದಕ ಮುಖ್ಯಸ್ಥನ ಸಾವಿನ ಬಗ್ಗೆ ದೃಢೀಕರಿಸದ ವರದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅಂತರ್ಜಾಲದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿವೆ. ಪಾಕಿಸ್ತಾನಿ ಪತ್ರಿಕೆ ಡಾನ್ ಮತ್ತು ಇತರ ಸ್ಥಳೀಯ ಮಾಧ್ಯಮಗಳು ಸ್ಫೋಟದ ಬಗ್ಗೆ ಯಾವುದೇ ವರದಿ ಮಾಡಿಲ್ಲ.