ಚಂಡೀಗಢ (ಪಂಜಾಬ್): ರಾಜ್ಯದಲ್ಲಿ ಹಬ್ಬದ ಸಂದರ್ಭದಲ್ಲಿ ಭಯೋತ್ಪಾದನೆಯನ್ನು ಹರಡಲು ಸಂಚು ರೂಪಿಸುತ್ತಿದ್ದ ನಿಷೇಧಿತ ಖಲಿಸ್ತಾನಿ ಪರ ಸಂಘಟನೆಯಾದ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಶನಲ್‌ಗೆ ಸಂಬಂಧಿಸಿದ ನಾಲ್ವರು ಆರೋಪಿಗಳನ್ನು ಶನಿವಾರ ಮೊಹಾಲಿಯಲ್ಲಿ ಪೊಲೀಸರು ಮತ್ತು ಸಿಐಎ ಸಿಬ್ಬಂದಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅವರ ಬಂಧನದ ಮೂಲಕ ಭಯೋತ್ಪಾದನಾ ಘಟಕವನ್ನು ಭೇದಿಸಲಾಗಿದೆ. ಇದೊಂದು ರಹಸ್ಯ ಕಾರ್ಯಚರಣೆಯಾಗಿತ್ತು. ಬಂಧಿತ ಭಯೋತ್ಪಾದಕ ಘಟಕದ ಸದಸ್ಯರಿಂದ ಶಸ್ತ್ರಾಸ್ತ್ರಗಳು ಮತ್ತು ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ಬಂಧನದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಹಬ್ಬ ಹರಿದಿನಗಳ ವೇಳೆ ರಾಜ್ಯದಲ್ಲಿ ಭಯೋತ್ಪಾದನೆ ಹರಡಲು ಸಂಚು ರೂಪಿಸುತ್ತಿದ್ದ ಭಯೋತ್ಪಾದಕ ಘಟಕದ ನಾಲ್ವರು ಸದಸ್ಯರನ್ನು ರಹಸ್ಯ ಕಾರ್ಯಾಚರಣೆ ಮೂಲಕ ಬಂಧಿಸಲಾಗಿದೆ. ಆರೋಪಿಗಳಿಂದ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳನ್ನು ಪಾಕಿಸ್ತಾನದಿಂದ ಡ್ರೋನ್ ಮೂಲಕ ಭಾರತಕ್ಕೆ ಸರಬರಾಜು ಮಾಡಿರುವುದು ತನಿಖೆ ವೇಳೆ ತಿಳಿದು ಬಂದಿದೆ. ಸದ್ಯ ಅವರ ಬಳಿ ಇದ್ದ ಪಿಸ್ತೂಲ್‌ಗಳು ಮತ್ತು 275 ಕಾಟ್ರಿಡ್ಜ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ ಮೂಲಕ ಗೌರವ್ ಯಾದವ್ ಮಾಹಿತಿ ಹಂಚಿಕೊಂಡಿದ್ದಾರೆ.
ಹತ್ಯೆ ಹಾಗೂ ಇತರೆ ಭಯೋತ್ಪಾದನಾ ಚಟುವಟಿಕೆಗಾಗಿ ಪಾಕಿಸ್ತಾನದಿಂದ ಶಸ್ತ್ರಾಸ್ತ್ರಗಳು ಕಳ್ಳಸಾಗಣೆಯಾಗುತ್ತಿದ್ದವು. ಇದಕ್ಕೆ ಡ್ರೋನ್‌ಗಳನ್ನು ಬಳಸಿರುವುದು ಗೊತ್ತಾಗಿದೆ. ಈ ಗುಂಪು ಪಾಕಿಸ್ತಾನ ಮೂಲದ ಭಯೋತ್ಪಾದಕ ಹರ್ವಿಂದರ್ ರಿಂಡಾ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತಿತ್ತು. ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ನೆರವಿನಿಂದ ಈ ಹರ್ವಿಂದರ್ ಸರಕುಗಳ ಬೆಂಬಲವನ್ನು ನೀಡುತ್ತಿದ್ದ. ಸದ್ಯ 6 ಪಿಸ್ತೂಲ್‌ಗಳು ಮತ್ತು 275 ಲೈವ್ ಕಾರ್ಟ್ರಿಡ್ಜ್‌ಗಳು ಸಿಕ್ಕಿವೆ ಎಂದು ಗೌರವ್ ಯಾದವ್ ಹೇಳಿದ್ದಾರೆ.
ಖಲಿಸ್ತಾನಿ ಪರ ಹೋರಾಟಗಾರ, ವಾರಿಸ್ ಪಂಜಾಬ್ ದೆ ಸಂಘಟನೆಯ ಮುಖ್ಯಸ್ಥ ಅಮೃತ್ ಪಾಲ್ ಸಿಂಗ್ ಬಂಧನ ಹಾಗೂ ಗಲಾಟೆಯಿಂದ ಖಲಿಸ್ತಾನಿ ವಿಷಯ ಮುನ್ನಲೆಗೆ ಬಂದಿತ್ತು. ಅಜ್ನಾಲಾ ಪೊಲೀಸ್ ಠಾಣೆಗೆ ನುಗ್ಗಿ ಅಮೃತ್ ಪಾಲ್ ಸಿಂಗ್ ತಪ್ಪಿಸಿಕೊಳ್ಳಲು ಸಹಾಯ ಮಾಡಿದ ಮತ್ತು ಸಮಾಜದಲ್ಲಿ ಅಶಾಂತಿ ಎಬ್ಬಿಸಲು ಪ್ರಯತ್ನಿಸಿದ್ದ ಆತನ ಸಹಚರರನನ್ನು ಇತ್ತೀಚೆಗೆ ಬಂಧಿಸಿಲಾಗಿತ್ತು. ಆದರೆ, ಬಂಧನದ ವೇಳೆ ಪೊಲೀಸರ ಮೇಲೆ ಹಲ್ಲೆ ಹಾಗೂ ಅಶಾಂತಿ ಸೃಷ್ಟಿಯಾಗಿದ್ದರಿಂದ ವ್ಯಾಪಕ ಆತಂಕಕ್ಕೆ ಕಾರಣವಾಗಿತ್ತು. ನಟಿ ಕಂಗನಾ ರಣಾವತ್ ಪಂಜಾಬ್‌ನ ಅಜ್ನಾಲಾ ಪೊಲೀಸ್ ಠಾಣೆಯ ಘಟನೆಯನ್ನು ಖಂಡಿಸಿ ಟ್ವೀಟ್ ಸಹ ಮಾಡಿದ್ದರು.
ಇದನ್ನೂ ಓದಿ: ಸ್ಥಳ ಮಹಜರು ವೇಳೆ ಪೊಲೀಸರ ಮೇಲೆ ಚಾಕುವಿನಿಂದ ದಾಳಿ.. ಮೂವರು ಪೊಲೀಸರಿಗೆ ಗಾಯ, ಆರೋಪಿಗೆ ಬಿತ್ತು ಗುಂಡೇಟು!