ಶ್ರೀನಗರ: ಉಗ್ರಗಾಮಿ ಚಟುವಟಿಕೆ ಮತ್ತು ಹವಾಲಾ ಅಕ್ರಮಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಹಿರಿಯ ಹುರಿಯತ್ ನಾಯಕ ಪ್ರೊ.ಅಬ್ದುಲ್ ಗನಿ ಭಟ್ ಅವರನ್ನು ತೀವ್ರ ವಿಚಾರಣೆಗೊಳಪಡಿಸಲಾಗಿದೆ. ವಿಚಾರಣೆಗೆ ಹಾಜರಾಗುವಂತೆ ಜಂಟಿ ತನಿಖಾ ಕೇಂದ್ರ ಅವರಿಗೆ ಸಮನ್ಸ್ ನೀಡಿತ್ತು. ಈ ಹಿನ್ನೆಲೆಯಲ್ಲಿ ಪ್ರೊ. ಅಬ್ದುಲ್ ಗನಿ ಭಟ್ ಅವರನ್ನು ವಿಶೇಷ ತನಿಖಾ ದಳ ಎಂಟು ಗಂಟೆಗಳ ತೀವ್ರ ವಿಚಾರಣೆ ನಡೆಸಿದೆ.
ಪ್ರತ್ಯೇಕತಾವಾದಿ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡಿದ ಆರೋಪದ ಮೇಲೆ ಬಂಧಿತರಾಗಿರುವ ಮಾಜಿ ಸಚಿವ ಜಿತೇಂದ್ರ ಸಿಂಗ್ ಅಲಿಯಾಸ್ ಬಾಬು ಸಿಂಗ್ ವಿಚಾರಣೆ ವೇಳೆ ಆಲ್ ಪಾರ್ಟಿಗಳ ಹುರಿಯತ್ ಕಾನ್ಫರೆನ್ಸ್‌ನ ಮಾಜಿ ಅಧ್ಯಕ್ಷ ಮತ್ತು ಜಮ್ಮು ಮತ್ತು ಕಾಶ್ಮೀರ ಮುಸ್ಲಿಂ ಕಾನ್ಫರೆನ್ಸ್ ಅಧ್ಯಕ್ಷ ಪ್ರೊಫೆಸರ್ ಭಟ್ ಅವರ ಹೆಸರು ಕೇಳಿಬಂದಿದೆ. ತನಿಖಾ ಸಂಸ್ಥೆಯು ಕಳೆದ ವಾರ ಅವರಿಗೆ ವಿಚಾರಣೆಗಾಗಿ ನೋಟಿಸ್ ಕಳುಹಿಸಿತ್ತು. ಅದರಂತೆ ಭಟ್ ವಿಚಾರಣೆಗೆ ಹಾಜರಾಗಿದ್ದರು. ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಭಯೋತ್ಪಾದಕ ಮತ್ತು ಪ್ರತ್ಯೇಕತಾವಾದಿ ಚಟುವಟಿಕೆಗಳ ಬಗ್ಗೆ ತನಿಖಾ ಸಂಸ್ಥೆ ಅವರಿಂದ ವಿವರಣೆ ಪಡೆದಿದೆ.