ಹೈದರಾಬಾದ್(ತೆಲಂಗಾಣ):ಹೈದರಾಬಾದ್‌ನಲ್ಲಿ ಉಗ್ರ ದಾಳಿಗೆ ಸಂಚು ರೂಪಿಸಿದ್ದ, ಪಾಕಿಸ್ತಾನದ ಐಎಸ್ಐ- ಎಇಟಿಯೊಂದಿಗೆ ಸಂಪರ್ಕ ಹೊಂದಿದ್ದ ಮೂವರನ್ನು ಪೊಲೀಸರು ನಗರದಲ್ಲಿ ಭಾನುವಾರ ಬಂಧಿಸಿದ್ದಾರೆ. ಇವರಿಂದ 4 ಗ್ರೆನೇಡ್, 5 ಲಕ್ಷ ರೂಪಾಯಿ ನಗದು ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
ಹೈದರಾಬಾದ್‌ನ ಮುಸಾರಾಂಬಾಗ್ ನಿವಾಸಿಯಾದ ಅಬ್ದುಲ್ ಜಾಹೇದ್, ಸೈದಾಬಾದ್ನ ಸಮೀರುದ್ದೀನ್ ಮತ್ತು ಮೆಹದಿಪಟ್ಟಣಂನ ಹಸನ್ ಫಾರೂಕಿ ಬಂಧಿತರು.
ನಗರದಲ್ಲಿ ಉಗ್ರ ದಾಳಿಗೆ ಯೋಜನೆ ಹೆಣೆಯಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಭಾನುವಾರ ಮಧ್ಯರಾತ್ರಿ ದಿಢೀರ್ ದಾಳಿ ನಡೆಸಿದ ಎಸ್ಐಟಿ ಪೊಲೀಸರು ಉಗ್ರರ ಜಾಡು ಪತ್ತೆ ಹಚ್ಚಿದ್ದಾರೆ. ಈ ಹಿಂದೆ ಬೇಗಂಪೇಟೆ ಟಾಸ್ಕ್ಫೋರ್ಸ್ ಕಚೇರಿಯಲ್ಲಿ ನಡೆದ ಸ್ಫೋಟ ಸೇರಿದಂತೆ ಹಲವು ಘಟನೆಗಳಲ್ಲಿ ಬಂಧಿತ ಜಾಹೇದ್ ಭಾಗವಹಿಸಿದ್ದ.
ಇವರೆಲ್ಲರೂ ಪಾಕಿಸ್ತಾನದ ಐಎಸ್ಐ, ಎಇಟಿಯೊಂದಿಗೆ ಸಂಪರ್ಕದಲ್ಲಿದ್ದಾರೆ. ಬೇಗಂಪೇಟೆ ಸ್ಫೋಟ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಫರ್ಹತುಲ್ಲಾ ಮತ್ತು ಅಬ್ದುಲ್ ಮಜೀದ್ ಪಾಕಿಸ್ತಾನದಲ್ಲಿದ್ದುಕೊಂಡೇ ಹೈದರಾಬಾದ್‌ನಲ್ಲಿ ದಾಳಿ ನಡೆಸುವ ಯೋಜನೆ ರೂಪಿಸಿದ್ದರು. ಇದಕ್ಕಾಗಿಯೇ ಸದ್ಯ ಬಂಧಿತರಾಗಿರುವ ಆರೋಪಿಗಳನ್ನು ನೇಮಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.