ಕರ್ನಾಟಕ

karnataka

ETV Bharat / bharat

ಭದ್ರತಾ ಪಡೆ ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ: ಪರಿಸ್ಥಿತಿ ಉದ್ವಿಗ್ನ - ಈಟಿವಿ ಭಾರತ ಕರ್ನಾಟಕ

ಭದ್ರತಾ ಪಡೆ ಮತ್ತು ಉಗ್ರರ ನಡುವಿನ ಗುಂಡಿನ ಚಕಮಕಿ ನಂತರ ಅರುಣಾಚಲ ಪ್ರದೇಶದ ಖರ್ಸಾಂಗ್‌ನಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ.

tension-prevails-in-arunachals-kharsang-over-gun-firing-incident
ಭದ್ರತಾ ಪಡೆ ಮತ್ತು ಉಗ್ರರ ನಡುವಿನ ಗುಂಡಿನ ಚಕಮಕಿ: ಪರಿಸ್ಥಿತಿ ಉದ್ವಿಗ್ನ

By ETV Bharat Karnataka Team

Published : Nov 18, 2023, 7:32 PM IST

ತಿನ್ಸುಕಿಯಾ (ಅರುಣಾಚಲ ಪ್ರದೇಶ):ಖರ್ಸಾಂಗ್‌ನಲ್ಲಿ ನಿನ್ನೆ( ಶುಕ್ರವಾರ) ರಾತ್ರಿ ಭದ್ರತಾ ಪಡೆ ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದ ನಂತರ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಮಾಹಿತಿ ಪ್ರಕಾರ, ಶುಕ್ರವಾರ ರಾತ್ರಿ 11 ಬೆಟಾಲಿಯನ್ ಅಸ್ಸೋಂ ರೈಫಲ್ಸ್ ಮತ್ತು ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಉಗ್ರ ಗಾಯಗೊಂಡಿದ್ದಾನೆ ಎಂದು ತಿಳಿದು ಬಂದಿದೆ. ಖರ್ಸಾಂಗ್‌ನ ಇಂಜಾನ್ ಬಸ್ತಿಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಉಗ್ರಗಾಮಿ ಗಾಯಗೊಂಡಿದ್ದು, ಆತನನ್ನು ಖರ್ಸಾಂಗ್​ನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

ಈ ಸುದ್ದಿ ತಿಳಿದ ಕೂಡಲೇ ಸ್ಥಳೀಯರು ರಾತ್ರೋರಾತ್ರಿ ಖರ್ಸಾಂಗ್ ಆಸ್ಪತ್ರೆಗೆ ಮುತ್ತಿಗೆ ಹಾಕಿ ಭದ್ರತಾ ಪಡೆ ನಡೆಸಿದ ಗುಂಡಿನ ದಾಳಿಯನ್ನು ಖಂಡಿಸಿದ್ದಾರೆ. ಇದರಿಂದ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಗಿಯಿತು. ಈ ವೇಳೆ ಆಸ್ಪತ್ರೆಯಲ್ಲಿದ್ದ ಭದ್ರತಾ ಸಿಬ್ಬಂದಿಯೊಂದಿಗೆ ಸ್ಥಳೀಯರು ತೀವ್ರ ವಾಗ್ವಾದ ನಡೆಸಿದರು. ಭದ್ರತಾ ಪಡೆ ಸ್ಥಳೀಯ ಜನರನ್ನು ಉಗ್ರಗಾಮಿಗಳು ಎಂಬ ಹಣೆಪಟ್ಟಿ ಕಟ್ಟುವ ಮೂಲಕ ಅವರ ಮೇಲೆ ಗುಂಡು ಹಾರಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಸ್ಥಳೀಯ ವ್ಯಕ್ತಿಯ ಕಾಲಿಗೆ ಗುಂಡು ಹಾರಿಸಲಾಗಿದೆ, ಉಗ್ರಗಾಮಿಗಳು ಎಂದು ಹಣೆಪಟ್ಟಿ ಕಟ್ಟಿ ಮುಗ್ಧ ಜನರ ಮೇಲೆ ಗುಂಡು ಹಾರಿಸುವ ಕೃತ್ಯವನ್ನು ಯಾರೂ ಸಹಿಸುವುದಿಲ್ಲ. ಇಡೀ ಘಟನೆಯ ಬಗ್ಗೆ ಸರಿಯಾದ ತನಿಖೆ ನಡೆಸಬೇಕು ಮತ್ತು ಭದ್ರತಾ ಪಡೆ ವಶದಲ್ಲಿರುವ ಸ್ಥಳೀಯ ಯುವಕರನ್ನು ಬಿಡುಗಡೆ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದರು.

ಇದರ ಮಧ್ಯೆ, ಮೂವರ ಉಗ್ರಗಾಮಿಗಳು ಇಂಜಾನ್ ಬಸ್ತಿಯಲ್ಲಿ ಬೀಡುಬಿಟ್ಟಿದ್ದರು ಎಂದು ಭದ್ರತಾ ಪಡೆ ತಿಳಿಸಿತ್ತು. ಉಗ್ರರ ಗುಂಪು ಮೊದಲು ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿದೆ, ಇದಕ್ಕೆ ಪ್ರತಿಯಾಗಿ ಭದ್ರತಾ ಪಡೆ ಗುಂಡು ಹಾರಿಸಿದೆ. ಇದರಲ್ಲಿ ಓರ್ವ ಉಗ್ರನ ಕಾಲಿಗೆ ಗುಂಡು ತಾಗಿದೆ. ಉಳಿದ ಇಬ್ಬರು ಕತ್ತಲೆ ಇರುವುದರಿಂದ ಭದ್ರತಾ ಪಡೆಯ ಕಣ್ತಪ್ಪಿಸಿ ಪರಾರಿಯಾಗಿದ್ದಾರೆ. ನಂತರ, ಗಾಯಗೊಂಡ ಉಗ್ರನನ್ನು ಖರ್ಸಾಂಗ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು ಎಂದು ಅರುಣಾಚಲ ಪೊಲೀಸರು ಭರವಸೆ ನೀಡಿದ್ದಾರೆ.

ಇದನ್ನೂ ಓದಿ:ಶೋಪಿಯಾನ್​ನಲ್ಲಿ ಭಾರತೀಯ ಸೇನೆ - ಉಗ್ರರ ನಡುವೆ ಗುಂಡಿನ ಚಕಮಕಿ: ಇಬ್ಬರು ಉಗ್ರರ ಹತ್ಯೆ

ಪುಲ್ವಾಮ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿ, ಉಗ್ರರ ಮಧ್ಯೆ ಗುಂಡಿನ ಚಕಮಕಿ:ಇತ್ತೀಚಿಗೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಹಾಗೂ ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಪೊಲೀಸರು ಮತ್ತು ಸೇನಾ ಸಿಬ್ಬಂದಿ ಉಗ್ರರ ವಿರುದ್ಧ ಜಂಟಿಯಾಗಿ ಶೋಧ ಕಾರ್ಯಾಚರಣೆ ನಡೆಸಿದ್ದವು. ಪುಲ್ವಾಮ ಜಿಲ್ಲೆಯ ಪರಿಗಾಮ್ ಪ್ರದೇಶದಲ್ಲಿ ಭಯೋತ್ಪಾದಕರ ಚಲನವಲನದ ಮಾಹಿತಿ ಮೇರೆಗೆ ಪೊಲೀಸರು ಹಾಗೂ ಸೇನೆ ಇಡೀ ಪ್ರದೇಶವನ್ನು ಸುತ್ತುವರಿದು, ಶೋಧ ಕಾರ್ಯ ಶುರು ಮಾಡಿತ್ತು. ಈ ವೇಳೆ, ಅಡಗಿ ಕುಳಿತಿದ್ದ ಉಗ್ರರು ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ಮಾಡಿದ್ದರು. ಇದರಿಂದ ಭದ್ರತಾ ಸಿಬ್ಬಂದಿ ಕೂಡ ಪ್ರತಿದಾಳಿ ಮಾಡಿತ್ತು. ಆದರೆ ಯಾವುದೇ ಗಾಯ, ಹಾನಿಯ ಬಗ್ಗೆ ವರದಿಯಾಗಿರಲಿಲ್ಲ.

ABOUT THE AUTHOR

...view details