ಗುವಾಹಟಿ:ಅತಿಯಾದ ಮಳೆ ಮತ್ತು ಮಂಜಿನಿಂದಾಗಿ ರಸ್ತೆ ಸರಿಯಾಗಿ ಕಾಣಿಸದೇ ಎರಡು ವಾಹನಗಳು ಡಿಕ್ಕಿಯಾಗಿ ಆಳ ಕಮರಿಗೆ ಬಿದ್ದು, 10 ಮಂದಿ ಸಾವನ್ನಪ್ಪಿದ ಘಟನೆ ಅಸ್ಸೋಂ- ನಾಗಾಲ್ಯಾಂಡ್ ಗಡಿ ಮರಿಯಾನಿ ಪ್ರದೇಶದಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದೆ.
ಜನರನ್ನು ಹೊತ್ತು ಸಾಗುತ್ತಿದ್ದ ವಾಹನ ಕೊಹಿಮಾದಿಂದ ಮರಿಯಾನಿಗೆ ತೆರಳುತ್ತಿತ್ತು. ಅತಿಯಾದ ಮಂಜಿನಿಂದಾಗಿ ರಸ್ತೆ ಮಸುಕಾಗಿ ಕಾಣಿಸುತ್ತಿತ್ತು. ಈ ವೇಳೆ ಎದುರಿಗೆ ಬಂದ ಟ್ರಕ್ಗೆ ವಾಹನ ಡಿಕ್ಕಿಯಾಗಿದೆ. ದುರ್ಘಟನೆಯಲ್ಲಿ ಎರಡೂ ವಾಹನಗಳು ರಸ್ತೆ ಬದಿಯ ಆಳದ ಕಮರಿಗೆ ಬಿದ್ದಿವೆ. ಸ್ಥಳದಲ್ಲೇ 10 ಮಂದಿ ಸಾವನ್ನಪ್ಪಿದ್ದಾರೆ. ಟ್ರಕ್ ಚಾಲಕ ಮತ್ತು ಕ್ಲೀನರ್ ಪರಿಸ್ಥಿತಿಯೂ ಚಿಂತಾಜನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾಗಾಲ್ಯಾಂಡ್ ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ಇದರಿಂದ ವಾಹನ ಸಂಚಾರಕ್ಕೆ ಮಂಜು ಅಡ್ಡಿಯಾಗಿದೆ. ಕಡಿಮೆ ಗೋಚರತೆಯಿಂದಾಗಿ ಎರಡೂ ವಾಹನಗಳು ಡಿಕ್ಕಿ ಹೊಡೆದುಕೊಂಡು 200 ಮೀಟರ್ ಆಳದ ಕಮರಿಗೆ ಬಿದ್ದಿವೆ. ವಿಷಯ ತಿಳಿದ ಬಳಿಕ ಪೊಲೀಸ್ ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿವೆ. ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಘಟನೆಯ ಬಗ್ಗೆ ಹೆಚ್ಚಿನ ವಿವರಗಳು ಸಿಗಬೇಕಿದೆ.
ಪಂಜಾಬ್ನಲ್ಲಿ ಕಾಳುವೆಗೆ ಬಿದ್ದ ಬಸ್:ಪಂಜಾಬ್ನಲ್ಲಿ ಪ್ರಯಾಣಿಕರಿದ್ದ ಬಸ್ ಕಾಲುವೆಗೆ ಬಿದ್ದು, ಅವಘಡದಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ. ಅಪಘಾತಕ್ಕೀಡಾದ ಬಸ್ ಮುಕ್ತಸರ್ ಸಾಹಿಬ್ ನಿಂದ ಕೊಟ್ಕಪುರಕ್ಕೆ ಹೊರಟಿತ್ತು. ಭಾರಿ ಮಳೆ ಮತ್ತು ಅತಿ ವೇಗ ಸಂಚಾರದಿಂದಾಗಿ ನಿಯಂತ್ರಣ ಕಳೆದುಕೊಂಡು ಘಟನೆ ಜರುಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.