ಕಾನ್ಪುರ (ಉತ್ತರಪ್ರದೇಶ): ಕಾನ್ಪುರದಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪಾಕಿಸ್ತಾನದ ಪ್ರಜೆಯೊಬ್ಬ ಬೇಕಂಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ರಾಮ ಜಾನಕಿ ದೇವಸ್ಥಾನ ಸೇರಿದಂತೆ ಇತರ ಆಸ್ತಿಯನ್ನು ಮಾರಾಟ ಮಾಡಿರುವುದು ಬಹಿರಂಗವಾಗಿದೆ. ಈ ಪ್ರಕರಣವನ್ನು ಕಾನ್ಪುರ ಆಡಳಿತ ಪತ್ತೆ ಹಚ್ಚಿದೆ. ಎನಿಮಿ ಪ್ರಾಪರ್ಟಿ ಕಸ್ಟೋಡಿಯನ್ (custodian of enemy property) ಕಚೇರಿಯು ಈಗ ದೇವಸ್ಥಾನ ಮತ್ತು ಇತರ ಎರಡು ಆಸ್ತಿಗಳನ್ನು 'ಶತ್ರು' ಆಸ್ತಿಯನ್ನಾಗಿ ಸೇರಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಅಲ್ಲದೇ ಖರೀದಿದಾರ ಮುಕ್ತಾರ್ ಬಾಬಾಗೆ ನೋಟಿಸ್ ಜಾರಿ ಮಾಡಲಾಗಿದೆ.
ಮಾಹಿತಿಯ ಪ್ರಕಾರ, ಕಾನ್ಪುರದ ಬೇಕಂಗಂಜ್ ಪ್ರದೇಶದಲ್ಲಿನ ಆಸ್ತಿಯನ್ನು 1982 ರಲ್ಲಿ ಪಾಕಿಸ್ತಾನಿ ಪ್ರಜೆಯಾದ ಅಬಿದ್ ರೆಹಮಾನ್ ಕಾನ್ಪುರದ ಮುಖ್ತಾರ್ ಬಾಬಾಗೆ ಮಾರಾಟ ಮಾಡಿದ್ದಾನೆ. ಆ ಸಮಯದಲ್ಲಿ ಮುಖ್ತಾರ್ ಬಾಬಾ ದೇವಸ್ಥಾನದ ಆವರಣದಲ್ಲಿ ಸೈಕಲ್ ರಿಪೇರಿ ಅಂಗಡಿಯನ್ನು ಹೊಂದಿದ್ದರು. ಅಬಿದ್ ರೆಹಮಾನ್ 1962 ರಲ್ಲಿ ಪಾಕಿಸ್ತಾನಕ್ಕೆ ತೆರಳಿದ್ದರು. ಬಳಿಕ ವಾಪಸ್ ಬಂದ ರೆಹಮಾನ್ ಆಸ್ತಿಯನ್ನು ಮುಖ್ತಾರ್ ಬಾಬಾಗೆ ಮಾರಾಟ ಮಾಡಿದ್ದಾರೆ. ಇದಾದ ನಂತರ ಮುಖ್ತಾರ್ ಬಾಬಾ ಅಲ್ಲಿ ವಾಸಿಸುತ್ತಿದ್ದ 18 ಹಿಂದೂ ಕುಟುಂಬಗಳನ್ನು ಅಲ್ಲಿಂದ ಓಡಿಸಿ, ಹೋಟೆಲ್ ನಿರ್ಮಿಸಿದ್ದಾರೆ ಎನ್ನಲಾಗ್ತಿದೆ.