ಬಲೋದಾ ಬಜಾರ್ (ಛತ್ತೀಸ್‌ಗಢ):ದೇವಸ್ಥಾನದಲ್ಲಿ ಪೂಜಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ 35 ವರ್ಷದ ವ್ಯಕ್ತಿಯೋರ್ವ ಹೆಂಡತಿ ಶೀಲದ ಬಗ್ಗೆ ಶಂಕೆ ವ್ಯಕ್ತಪಡಿಸಿ, ಆಕೆಗೆ ಬೆಂಕಿ ಹಚ್ಚಿ ಕೊಲೆಗೈದಿರುವ ಘಟನೆ ಛತ್ತೀಸ್ಗಢದ ಭಟಪರ ಜಿಲ್ಲೆಯಲ್ಲಿ ನಡೆದಿದೆ.
ರಾಮನಾರಾಯಣ ಪಾಂಡೆ (35) ದೇವಸ್ಥಾನವೊಂದರಲ್ಲಿ ಪೂಜಾರಿಯಾಗಿದ್ದ. ಈತನ ಪತ್ನಿ ಮಂದಾಕಿನಿ ಪಾಂಡೆ(28), ಅನ್ಯ ಪುರುಷನ ಜೊತೆ ದೈಹಿಕ ಸಂಪರ್ಕ ಬೆಳೆಸುತ್ತಿದ್ದಾಳೆಂದು ಅನುಮಾನ ವ್ಯಕ್ತಪಡಿಸಿ ಕೊಲೆ ಮಾಡಿದ್ದಾನೆ. ಇದಾದ ಬಳಿಕ ಪೊಲೀಸರಿಗೆ ಸುಳ್ಳು ಮಾಹಿತಿ ನೀಡಿರುವ ಆತ, ತನ್ನ ಹೆಂಡತಿ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ್ದಾಳೆಂದು ತಿಳಿಸಿದ್ದಾನೆ. ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡು ವಿಚಾರಣೆ ನಡೆಸಿದಾಗ ನಿಜಾಂಶ ಹೊರಬಿದ್ದಿದೆ.
ಇದನ್ನೂ ಓದಿರಿ: ಟಿ-20 ವಿಶ್ವಕಪ್ ತಂಡದಿಂದ ಹೊರಬಿದ್ದ ಚಹಲ್‌ಗೆ ಆರ್ಸಿಬಿ ಪರ ಮಿಂಚುವ ಛಲ
ಘಟನೆಗೆ ಸಂಬಂಧಿಸಿದಂತೆ ಮಾಹಿತಿ ಹಂಚಿಕೊಂಡಿರುವ ಪೊಲೀಸರು, ಪೂಜಾರಿ ಮೊದಲಿಗೆ ತನ್ನ ಪತ್ನಿಯನ್ನು ಹರಿತವಾದ ಆಯುಧ ಬಳಸಿ ಕೊಲೆ ಮಾಡಲು ಪ್ರಯತ್ನಿಸಿದ್ದಾನೆ. ಆದಾಗ್ಯೂ, ಆಕೆ ಸಾಯದಿದ್ದಾಗ, ಆಕೆಯನ್ನು ದೇವಸ್ಥಾನದ ರೂಂನಲ್ಲಿ ಕೂಡಿ ಹಾಕಿ ಬೆಂಕಿ ಹಚ್ಚಿದ್ದಾನೆ. ದೇವಸ್ಥಾನದ ಕೋಣೆಗೆ ಬೆಂಕಿ ಹತ್ತಿರುವುದನ್ನು ನೋಡಿರುವ ಗ್ರಾಮಸ್ಥರು ಜಮಾಯಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ವೇಳೆ ಮಾಹಿತಿ ನೀಡಿರುವ ಪೂಜಾರಿ, ತನ್ನ ಹೆಂಡತಿಗೆ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡು ಸಾವನ್ನಪ್ಪಿದ್ದಾಳೆ ಎಂದು ಸುಳ್ಳು ಮಾಹಿತಿ ನೀಡಿದ್ದಾನೆ. ಆದರೆ ವಿಚಾರಣೆಗೊಳಪಡಿಸಿದಾಗ ನಡೆದಿರುವ ಸತ್ಯಾಂಶವನ್ನ ಬಿಚ್ಚಿಟ್ಟಿದ್ದಾನೆ. ಈಗಾಗಲೇ ಆತನ ವಿರುದ್ಧ ಎಫ್ಐಆರ್ ದಾಖಲು ಮಾಡಿಕೊಂಡಿರುವ ಪೊಲೀಸರು, ಬಂಧನ ಮಾಡಿದ್ದಾರೆ.