ಹೈದರಾಬಾದ್ (ತೆಲಂಗಾಣ): ಯಮಧರ್ಮ ಎಂದಾಕ್ಷಣ ಆತನ ಜೊತೆ ನೆನಪಾಗೋ ಹೆಸರು ಈ ಚಿತ್ರಗುಪ್ತ. ಪಾಪ, ಪುಣ್ಯಗಳ ಲೆಕ್ಕಹಾಕುವ ಮಾಸ್ಟರ್ ಅಂತಾನೆ ಪುರಾಣಗಳಲ್ಲಿ ಓದಿದ್ದೇವೆ. ಆದ್ರೆ ಜನ ಚಿತ್ರಗುಪ್ತನಿಗೂ ವಿಶೇಷ ಗೌರವ ತೋರಿಸಿ ಆತನಿಗೂ ಪೂಜೆ ಮಾಡುತ್ತಾರೆ. ದೇಶದಲ್ಲಿ ಆತನಿಗೆ 10 ಕಡೆ ವಿಶೇಷ ದೇವಾಲಯ ನಿರ್ಮಾಣವಾಗಿವೆ. ಅದರಲ್ಲಿ ಹೈದರಾಬಾದ್ನಲ್ಲಿನ ಚಿತ್ರಗುಪ್ತ ದೇವಾಲಯ ಇನ್ನಷ್ಟು ವಿಶೇಷ ಎನಿಸಿದೆ. ಯಾಕಂದ್ರೆ ಅವಿವಾಹಿತರು ಈ ದೇವಾಲಯಕ್ಕೆ ಭೇಟಿ ನೀಡಿದರೆ ವಿವಾಹ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ.
ನವಾಬರ ಕಾಲದಲ್ಲಿ ಗುಮಾಸ್ತರು ಚಿತ್ರಗುಪ್ತನನ್ನು ಪ್ರಾರ್ಥಿಸುತ್ತಿದ್ದರು. ಆಗಿನ ಮಂತ್ರಿಯಾಗಿದ್ದ ರಾಜ ಕಿಶನ್ ಪ್ರಸಾದ್ ಈ ದೇವಾಲಯವನ್ನು ವಿಶಾಲವಾದ ಸ್ಥಳದಲ್ಲಿ ನಿರ್ಮಿಸಿದ್ದಾರೆ ಎನ್ನಲಾಗಿದೆ. ಚಿತ್ರಗುಪ್ತನ ಜೊತೆಗೆ ಅವರ ಪತ್ನಿಯರಾದ ನಂದಿನಿ ಮತ್ತು ಶೋಭವತಿಯನ್ನೂ ಈ ದೇವಾಲಯದಲ್ಲಿ ವಿಗ್ರಹಾರಾಧನೆ ಮಾಡಿ ಪ್ರಾರ್ಥಿಸಲಾಗುತ್ತದೆ.
ಕಾಲಾನಂತರ ಈ ದೇವಾಲಯ ನಿರ್ಲಕ್ಷ್ಯಕ್ಕೂ ಒಳಗಾಗಿತ್ತು. ಆದ್ರೆ ಚಿತ್ರಗುಪ್ತನ ದೇವಾಲಯ ಆವರಣದಲ್ಲಿ ರಾಮಾಲಯ, ಶಿವ, ಸಾಯಿಬಾಬಾ, ಆಂಜನೇಯಸ್ವಾಮಿ ದೇವಾಲಯ ನಿರ್ಮಿಸಲಾಯಿತು. ಇದಾದ ಬಳಿಕ ಕೇವಲ ತೆಲಂಗಾಣ ಮಾತ್ರವಲ್ಲ ಹೊರ ರಾಜ್ಯಗಳಾದ ತಮಿಳುನಾಡು, ಮಹಾರಾಷ್ಟ್ರ, ಕರ್ನಾಟಕದಿಂದಲೂ ಭಕ್ತರು ಆಗಮಿಸಿ ಚಿತ್ರಗುಪ್ತನ ದರ್ಶನ ಪಡೆಯುತ್ತಾರೆ.