ಹೈದರಾಬಾದ್:ತೆಲಂಗಾಣದಲ್ಲಿ ಜನರು ರಣಬಿಸಿಲಿನ ಬೇಗೆಗೆ ತತ್ತರಿಸುತ್ತಿದ್ದಾರೆ. ಇದೇ ತಿಂಗಳ 29ರ ವರೆಗೆ ಈ ತಾಪಮಾನ ಮುಂದುವರಿಯುವ ಸಾಧ್ಯತೆ ಇದೆ. ಬುಧವಾರ ಬಹುತೇಕ ಎಲ್ಲ ಪ್ರದೇಶಗಳಲ್ಲಿ 40 ರಿಂದ 46 ಡಿಗ್ರಿ ತಾಪಮಾನ ದಾಖಲಾಗಿದೆ. ಭದ್ರಾದ್ರಿ ಜಿಲ್ಲೆಯ ಜೂಲುರುಪಾಡು 46.4 ಡಿಗ್ರಿ, ಬಯ್ಯಾರಂನಲ್ಲಿ 45.3 ಡಿಗ್ರಿ, ಮಾಮಿಲಗುಡೆಂ (ಸೂರ್ಯಪೇಟೆ) 45.2 ಡಿಗ್ರಿ, ನಿಡಮನೂರಿನಲ್ಲಿ (ನಲ್ಗೊಂಡ) 45.2 ಡಿಗ್ರಿ, ಮಹದೇವಪುರ (ಜಯಶಂಕರ್ ಭೂಪಾಲಪಲ್ಲಿ ಜಿಲ್ಲೆ) 44.9 ಡಿಗ್ರಿ ತಾಪಮಾನ ದಾಖಲಾಗಿದೆ. ಬಿಸಿಲಿನ ಹೊಡೆತಕ್ಕೆ ತೆಲುಗು ರಾಜ್ಯದ ವಿವಿಧೆಡೆ ಏಳು ಮಂದಿ ಸಾವನ್ನಪ್ಪಿದ್ದಾರೆ.
ಮಂಗಳವಾರ ಹಗಲಿನಲ್ಲಿಯೇ ರಾಜ್ಯದಲ್ಲಿ ಗರಿಷ್ಠ 45.2 ಡಿಗ್ರಿ ಉಷ್ಣಾಂಶ ದಾಖಲಾಗಿದ್ದು, ಒಂದೇ ದಿನದಲ್ಲಿ 1.2 ಡಿಗ್ರಿ ಏರಿಕೆಯಾಗಿ ಬುಧವಾರ 46.4 ಡಿಗ್ರಿ ತಲುಪಿರುವುದು ಆತಂಕ ಮೂಡಿಸಿದೆ. ಗುರುವಾರ (ಇಂದು) ಹಲವೆಡೆ 43 ರಿಂದ 44 ಡಿಗ್ರಿ ತಾಪಮಾನ ಇರಲಿದ್ದು, ಜನರು ಎಚ್ಚರವಹಿಸಬೇಕು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ದೇಶದ ವಾಯುವ್ಯ ಪ್ರದೇಶದಿಂದ ಕಡಿಮೆ ಎತ್ತರದ ಬಿಸಿಗಾಳಿ ತೆಲಂಗಾಣ ರಾಜ್ಯಕ್ಕೆ ಬೀಸುತ್ತಿದೆ. ಇನ್ನೂ ಕೆಲವೆಡೆ ಅಚ್ಚರಿಯೆಂಬಂತೆ ಆಲಿಕಲ್ಲು ಮಳೆಯಿಂದಾಗಿ ಜನರು ಹೊರಗೆ ಹೋಗಲು ಸಾಧ್ಯವಾಗುತ್ತಿಲ್ಲ. ರಾತ್ರಿ ವೇಳೆಯೂ ಬಿಸಿಲಿನ ಝಳ ಹೆಚ್ಚಾಗಿದ್ದರಿಂದ ಬಿಸಿಲ ತಾಪದಿಂದ ಜನರು ನಲುಗಿದ್ದಾರೆ. ಮಂಗಳವಾರ ರಾತ್ರಿ ಹನುಮಕೊಂಡದಲ್ಲಿ 31 ಡಿಗ್ರಿ ಹಾಗೂ ಖಮ್ಮಂನಲ್ಲಿ 30 ಡಿಗ್ರಿ ಉಷ್ಣಾಂಶ ದಾಖಲಾಗಿದೆ.
ಹೈದರಾಬಾದ್‌ನ ಉಪನಗರವಾದ ಪತಂಚೇರುದಲ್ಲಿ ಮಂಗಳವಾರ ರಾತ್ರಿ 20.2 ಡಿಗ್ರಿಗಳಷ್ಟು ಕಡಿಮೆ ತಾಪಮಾನ ದಾಖಲಾಗಿತ್ತು. ಇದು ಸಾಮಾನ್ಯ ತಾಪಮಾನಕ್ಕಿಂತ 4.8 ಡಿಗ್ರಿ ಕಡಿಮೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆಕಾಶದಲ್ಲಿ ಮೋಡಗಳೇ ಇಲ್ಲವಾಗಿರುವುದರಿಂದ ಸೂರ್ಯನ ಕಿರಣಗಳು ನೇರವಾಗಿ ಭೂಮಿಗೆ ಬೀಳುತ್ತಿವೆ ಮತ್ತು ಭೂಮಿಯ ವಾತಾವರಣವು ತುಂಬಾ ಬಿಸಿಯಾಗಿದ್ದು, ಮನೆಯಿಂದ ಹೊರ ಹೋಗುವುದೇ ಕಷ್ಟಕರವಾಗಿದೆ. ರಾತ್ರಿಯಲ್ಲಿ ಅದೇ ಶಾಖವು ಮುಂದುವರಿದು ಹೆಚ್ಚಿನ ತಾಪಮಾನ ದಾಖಲಾಗುತ್ತಿದೆ.