ತಿರುವನಂತಪುರಂ : ಕೆಲವು ತಿಂಗಳ ಹಿಂದೆ ವಿಪರೀತ ಮಳೆಯಾಗಿ ಸಂಕಷ್ಟ ಅನುಭವಿಸಿದ್ದ ಕೇರಳದಲ್ಲಿ ಈಗ ಉಷ್ಣತಾಮಾನವು ವಿಪರೀತ ಎನ್ನುವಷ್ಟರ ಮಟ್ಟಿಗೆ ಏರಿಕೆಯಾಗುತ್ತಿರುವುದು ಮತ್ತೊಂದು ರೀತಿಯ ಸಂಕಷ್ಟಕ್ಕೆ ಕಾರಣವಾಗಿದೆ. ಈ ಹಿಂದೆ ಎಂದೂ ಕಾಣದ ಮಟ್ಟಕ್ಕೆ ರಾಜ್ಯದಲ್ಲಿ ಉಷ್ಣಾಂಶ ಹೆಚ್ಚಳವಾಗುತ್ತಿದೆ. ಕರಾವಳಿ ರಾಜ್ಯವಾದ ಕೇರಳದಲ್ಲಿ ಬೇಸಿಗೆ ಈಗ ತಾನೇ ಆರಂಭವಾಗುತ್ತಿದೆ. ಆದರೆ, ತಾಪಮಾನ ಮಾತ್ರ ದಿಢೀರ್ ಹೆಚ್ಚಳವಾಗುತ್ತಿರುವುದು ಆತಂಕ ಮೂಡಿಸಿದೆ.
ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್‌ಡಿಎಂಎ) ಸಿದ್ಧಪಡಿಸಿದ ವರದಿಯ ಪ್ರಕಾರ, ಕೇರಳ ರಾಜ್ಯದ ಕೆಲವು ಪ್ರದೇಶಗಳು 54 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ಉಷ್ಣಾಂಶ ದಾಖಲಿಸಿವೆ. ಇದು ಆರೋಗ್ಯಕ್ಕೆ ಗಂಭೀರವಾದ ಅಪಾಯಗಳನ್ನು ತರಬಹುದು ಮತ್ತು ಸನ್ ಸ್ಟ್ರೋಕ್ (ಶಾಖದ ಹೊಡೆತದ) ಸಾಧ್ಯತೆಗಳನ್ನು ಉಂಟು ಮಾಡುತ್ತದೆ. ಶಾಖ ಸೂಚ್ಯಂಕ (Heat index)ವು ವಾತಾವರಣದ ತಾಪಮಾನ ಮತ್ತು ತೇವಾಂಶದ ಸಂಯೋಜಿತ ಪರಿಣಾಮದಿಂದ ಉಂಟಾಗುವ ಉಷ್ಣಾಂಶದ ಒಂದು ಸೂಚಕವಾಗಿದೆ.
ವಿಶ್ವದ ಅನೇಕ ಅಭಿವೃದ್ಧಿ ಹೊಂದಿದ ದೇಶಗಳು ಸಾರ್ವಜನಿಕರಿಗೆ ಆರೋಗ್ಯದ ಎಚ್ಚರಿಕೆಗಳನ್ನು ನೀಡುವ ಸಲುವಾಗಿ 'ತಾಪಮಾನದಂತೆ ಭಾಸವಾಗುತ್ತಿದೆ' (feels like temperature) ಮಾದರಿಯಲ್ಲಿ ಉಷ್ಣಾಂಶವನ್ನು ಹೇಳುತ್ತವೆ. ಅಂದರೆ ಉಷ್ಣತಾಮಾಪಕದಲ್ಲಿ ತೋರಿಸುವುದಕ್ಕಿಂತಲೂ ವಾಸ್ತವದಲ್ಲಿ ಅನುಭವವಾಗುವ ಉಷ್ಣಾಂಶ ಬೇರೆಯಾಗಿದ್ದರೆ, ತಾಪಮಾನದಂತೆ ಭಾಸವಾಗುತ್ತಿದೆ ಎಂಬ ಮಾದರಿಯಲ್ಲಿ ಅದನ್ನು ಹೇಳಲಾಗುತ್ತದೆ. ಅದರ ಪ್ರಕಾರ, ತಿರುವನಂತಪುರಂ ಜಿಲ್ಲೆಯ ದಕ್ಷಿಣ ಭಾಗ ಮತ್ತು ಆಲಪ್ಪುಳ, ಕೊಟ್ಟಾಯಂ ಮತ್ತು ಕಣ್ಣೂರು ಜಿಲ್ಲೆಗಳ ಕೆಲವು ಪ್ರದೇಶಗಳು 54 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ feels like temperature ಹೊಂದಿವೆ.