ನವದೆಹಲಿ: ತೆಲುಗು ಖ್ಯಾತ ನಟಿ ಹಾಗೂ ಮಾಜಿ ಶಾಸಕಿ ಜಯಸುಧಾ ಬುಧವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತೆಲಂಗಾಣ ಬಿಜೆಪಿ ಅಧ್ಯಕ್ಷ ಕಿಶನ್ ರೆಡ್ಡಿ ಮತ್ತು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ತರುಣ್ ಚುಗ್ ಸಮ್ಮುಖದಲ್ಲಿ ನಟಿ ಜಯಸುಧಾ ಬಿಜೆಪಿ ಸೇರಿದ್ದಾರೆ.
ಕಳೆದ ಒಂದು ವರ್ಷದಿಂದಲೂ ಜಯಸುಧಾ ಬಿಜೆಪಿ ಸೇರುತ್ತಾರೆ ಎಂಬ ಮಾತುಗಳು ಬಲವಾಗಿ ಕೇಳಿ ಬಂದಿದ್ದವು. ಅಂತಿಮವಾಗಿ ಇಂದು ಕೇಸರಿ ಪಕ್ಷದ ಬಾವುಟವನ್ನು ಅವರು ಹಿಡಿದಿದ್ದಾರೆ. ಬಿಜೆಪಿ ಸೇರಿದ ಬಳಿಕ ಪ್ರತಿಕ್ರಿಯಿಸಿರುವ ಜಯಸುಧಾ, ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ನಾವು ದೇಶಕ್ಕೆ ಸೇವೆ ಸಲ್ಲಿಸಬೇಕಾಗಿದೆ. ಇಂದು ನಾವು ಭಾರತದಿಂದ ಹೊರಗೆ ಹೋದಾಗ ಜನರು ಭಾರತದ ಬಗ್ಗೆ ಮಾತನಾಡುತ್ತಾರೆ.. ಇದಕ್ಕೆ ಪ್ರಧಾನಿ ಮೋದಿ ಕಾರಣ ಎಂದು ಹೇಳಿದ್ದಾರೆ.
2022ರ ಆಗಸ್ಟ್ನಲ್ಲಿ ಮುನುಗೋಡು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಜಯಸುಧಾ ಭೇಟಿ ಮಾಡಲಿದ್ದಾರೆ ಎಂಬ ಸುದ್ದಿಯಾಗಿತ್ತು. ಆಗ ಜಯಸುಧಾ ಅವರನ್ನು ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಈಟಾಳ ರಾಜೇಂದ್ರ ಭೇಟಿ ಮಾಡಿ ಪಕ್ಷಕ್ಕೆ ಸೇರುವಂತೆ ಆಹ್ವಾನ ನೀಡಿದ್ದರು ಎಂದು ಹೇಳಲಾಗಿತ್ತು. ಆದರೆ, ಜಯಸುಧಾ ಬಿಜೆಪಿಯ ಮುಂದೆ ಕೆಲ ಷರುತ್ತುಗಳನ್ನಿಟ್ಟಿದ್ದರು. ಇವುಗಳಿಗೆ ಒಪ್ಪಿದರೆ ಪಕ್ಷಕ್ಕೆ ಸೇರುವುದಾಗಿ ಜಯಸುಧಾ ತಿಳಿಸಿದ್ದಾರೆ. ಹೀಗಾಗಿಯೇ ಹೈಕಮಾಂಡ್ ಸೂಚನೆಗಾಗಿ ತೆಲಂಗಾಣ ಬಿಜೆಪಿಯ ನಾಯಕರು ಕಾಯುತ್ತಿದ್ದಾರೆ ಎಂದು ವರದಿಯಾಗಿತ್ತು.