ನವದೆಹಲಿ: ಭಾರತೀಯ ಹೂಡಿಕೆದಾರರ ಹಿತಾಸಕ್ತಿಗಳನ್ನು ರಕ್ಷಿಸುವ ಬಗ್ಗೆ ಶುಕ್ರವಾರ ಕಾಳಜಿ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಷೇರು ಮಾರುಕಟ್ಟೆಯನ್ನು ನಿಯಂತ್ರಿಸಲು ದೃಢವಾದ ವ್ಯವಸ್ಥೆಯೊಂದನ್ನು ರಚಿಸುವತ್ತ ಒಲವು ತೋರಿದೆ. ಅಮಾಯಕ ಹೂಡಿಕೆದಾರರ ಶೋಷಣೆ ಮಾಡಲಾಗುತ್ತಿದೆ ಮತ್ತು ಅದಾನಿ ಗ್ರೂಪ್‌ನ ಷೇರು ಮೌಲ್ಯದ ಕೃತಕ ಕುಸಿತ ಸೃಷ್ಟಿಸಲಾಗಿದೆ ಎಂದು ಆರೋಪಿಸಿ ಸಲ್ಲಿಸಲಾದ ಪಿಐಎಲ್ಗಳ ಬಗ್ಗೆ ತಮ್ಮ ಅಭಿಪ್ರಾಯ ಸಲ್ಲಿಸುವಂತೆ ಕೇಂದ್ರ ಸರ್ಕಾರ ಮತ್ತು ಮಾರುಕಟ್ಟೆ ನಿಯಂತ್ರಕ ಸೆಬಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠವು ಈ ಬಗ್ಗೆ ಆತಂಕ ವ್ಯಕ್ತಪಡಿಸಿತು ಮತ್ತು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಯಾರದೋ ತಲೆದಂಡಕ್ಕೆ ಯೋಜಿಸುತ್ತಿಲ್ಲ ಎಂಬುದನ್ನು ಖಾತ್ರಿಪಡಿಸುವಂತೆ ತಿಳಿಸಿತು. ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಮತ್ತು ಜೆ.ಬಿ.ಪರ್ದಿವಾಲಾ ಅವರನ್ನೊಳಗೊಂಡ ಪೀಠವು, ಆಧುನಿಕ ಕಾಲದಲ್ಲಿ ಬಂಡವಾಳ ಹರಿವು ತಡೆರಹಿತವಾಗಿರುವ ಮಾರುಕಟ್ಟೆಯಲ್ಲಿ ಹೂಡಿಕೆದಾರರ ಹಿತಾಸಕ್ತಿಗಳನ್ನು ರಕ್ಷಿಸಲು ನಿಯಂತ್ರಕ ಕಾರ್ಯವಿಧಾನವನ್ನು ಬಲಪಡಿಸುವುದು ಸೇರಿದಂತೆ ವಿವಿಧ ವಿಷಯಗಳ ಕುರಿತು ಹಣಕಾಸು ಸಚಿವಾಲಯ ಮತ್ತು ಇತರರಿಂದ ಅಭಿಪ್ರಾಯಗಳನ್ನು ಕೋರಿತು.
ಇದು ಕೇವಲ ಮುಕ್ತ ಸಂವಾದವಾಗಿದೆ. ಅವರು ನ್ಯಾಯಾಲಯದ ಮುಂದೆ ಸಮಸ್ಯೆಯನ್ನು ತಂದಿದ್ದಾರೆ. ಭಾರತೀಯ ಹೂಡಿಕೆದಾರರ ರಕ್ಷಣೆಯನ್ನು ನಾವು ಹೇಗೆ ಖಚಿತಪಡಿಸಿಕೊಳ್ಳುತ್ತೇವೆ ಎಂಬುದು ಆತಂಕದ ಸಂಗತಿಯಾಗಿದೆ. ಇಲ್ಲಿ ನಡೆದಿರುವುದು ಶಾರ್ಟ್ ಸೆಲ್ಲಿಂಗ್ ಆಗಿದೆ. ಬಹುಶಃ ಸೆಬಿ ತನ್ನ ತನಿಖೆಯನ್ನು ಮಾಡುತ್ತಿದೆ. ನಾವಿಲ್ಲಿ ಯಾರನ್ನೋ ಬಲಿಪಶು ಮಾಡಲು ಯೋಜಿಸುತ್ತಿಲ್ಲ ಎಂಬುದನ್ನು ನಿಮ್ಮ ಅಧಿಕಾರಿಗಳಿಗೆ ತಿಳಿಸಿ ಎಂದು ಕೋರ್ಟ್ ಹೇಳಿತು.