ಮುಂಬೈ: ನಕಲಿ ಛಾಪಾ ಪೇಪರ್ ಹಗರಣದ ಆರೋಪಿ ಅಬ್ದುಲ್ ಕರೀಂ ತೆಲಗಿ ಅವರ ಪುತ್ರಿ ಸನಾ ಇರ್ಫಾನ್ ತಾಳಿಕೋಟಿ ಅವರು ‘Scam 2003 - The curious case of Abdul Karim Lala Telgi’ ಎಂಬ ತಮ್ಮ ಜೀವನ ಆಧಾರಿತ ವೆಬ್ ಸರಣಿ ತಯಾರಕರ ವಿರುದ್ಧ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಇಂದು ವಿಚಾರಣೆ ನಡೆಯುವ ಸಾಧ್ಯತೆ ಇದೆ.
2003 ರ ಸ್ಟಾಂಪ್ ಪೇಪರ್ ಹಗರಣದ ಪ್ರಮುಖ ಆರೋಪಿ ಅಬ್ದುಲ್ ಕರೀಂ ಲಾಲಾಗೆ ಸಂಬಂಧಿಸಿದ ವೆಬ್ ಸರಣಿ ಮಾಡುವ ಮುನ್ನ ನಿರ್ಮಾಪಕರು ಕುಟುಂಬದ ಒಪ್ಪಿಗೆ ಪಡೆದಿಲ್ಲ ಎಂದು ಆರೋಪಿಸಿ, ಅದರ ಬಿಡುಗಡೆಗೆ ತಡೆಯಾಜ್ಞೆ ಕೋರಿ ಸನಾ ಇರ್ಫಾನ್ ತಾಳಿಕೋಟಿ ಅರ್ಜಿ ಸಲ್ಲಿಸಿದ್ದಾರೆ. ಮುಂಬೈ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಅಪ್ಲಾಸ್ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕ ಹನ್ಸಲ್ ಮೆಹ್ತಾ, ಜನರಲ್ ಮ್ಯಾನೇಜರ್ ಪ್ರಸೂನ್ ಗಾರ್ಗ್ ಮತ್ತು ಸೋನಿ ಲಿವ್ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದ್ದು, ಇಂದು ಗುರುವಾರ ವಿಚಾರಣೆ ನಡೆಯಲಿದೆ.
ವಕೀಲ ಮಾಧವ್ ಥೋರಟ್ ಅವರ ಮೂಲಕ ಅರ್ಜಿ ಸಲ್ಲಿಸಿ ಮೊಕದ್ದಮೆ ಹೂಡಿದ ಸನಾ ಇರ್ಫಾನ್, ಈ ವೆಬ್ ಸರಣಿ ಪುಸ್ತಕ ಆಧರಿಸಿದ್ದು, ವಾಸ್ತವಿಕ ವ್ಯತ್ಯಾಸ ಹೊಂದಿದೆ. ಜೊತೆಗೆ ಕುಟುಂಬದ ಗೌಪ್ಯತೆ, ಘನತೆ ಮತ್ತು ಸ್ವಾಭಿಮಾನದ ಹಕ್ಕು ಉಲ್ಲಂಘಿಸುತ್ತದೆ ಎಂದು ಆರೋಪಿಸಿದ್ದಾರೆ.
ಕಾದಂಬರಿಯಲ್ಲಿ ಮೂಡಿ ಬಂದಿರುವ ನಮ್ಮ ತಂದೆಯ ಪಾತ್ರದ ಚಿತ್ರಣ ಸುಳ್ಳು, ಆಧಾರರಹಿತ, ಅವಹೇಳನಕಾರಿ, ಅಹಿತಕರ ಮತ್ತು ಹೆಚ್ಚು ಮಾನಹಾನಿಕರವಾಗಿದೆ. ನಮ್ಮ ಕುಟುಂಬಕ್ಕೆ ಮತ್ತು ಮೃತ ತಂದೆಗೆ ಮಾನಹಾನಿ ಮಾಡುವ ಏಕೈಕ ಉದ್ದೇಶದಿಂದ ವೆಬ್ ಸರಣಿ ಚಿತ್ರೀಕರಿಸಲಾಗಿದೆ. ಇದರಿಂದಾಗಿ ನಮ್ಮ ಕುಟುಂಬದ ಘನತೆಗೆ ತುಂಬಲಾರದ ನಷ್ಟ ಉಂಟಾಗಲಿದೆ. ಜೊತೆಗೆ ನನ್ನ ಅಪ್ರಾಪ್ತ ಮಕ್ಕಳ ಮೇಲೂ ಹೆಚ್ಚು ಹಾನಿ ಉಂಟು ಮಾಡುತ್ತಿದೆ ಎಂದು ಹೇಳಿದ್ದಾರೆ.