ಕಾಮರೆಡ್ಡಿ (ತೆಲಂಗಾಣ):ಅಪರಾಧಗಳು ಇಂದು ದೇಶದ ಮೂಲೆ ಮೂಲೆಯಲ್ಲಿ ನಡೆಯುತ್ತಿವೆ. ಆದರೆ ತೆಲಂಗಾಣದ ರಾಯಗಟ್‌ಪಲ್ಲಿ ಗ್ರಾಮ ಇದಕ್ಕೆ ವಿರುದ್ಧವಾಗಿ ಇದೆ. ಈ ಗ್ರಾಮದಲ್ಲಿ ಕಳೆದ 40 ವರ್ಷಗಳಿಂದ ಒಂದೇ ಒಂದು ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿಲ್ಲ. ಕಾಮರೆಡ್ಡಿ-ಮೇದಕ್ ಜಿಲ್ಲೆಗಳ ಗಡಿಭಾಗದಲ್ಲಿರುವ ಜನರು ಇಂದಿಗೂ ಪೊಲೀಸ್ ಠಾಣೆಯ ಮೆಟ್ಟಿಲೇರಿಲ್ಲ.
ಸ್ವಾತಂತ್ರ್ಯ ದಿನಾಚರಣೆಯಂದು ರಾಯಗಟ್‌ಪಲ್ಲಿ ಜಿಲ್ಲಾ ನ್ಯಾಯಾಧೀಶೆ ಶ್ರೀದೇವಿ ಅವರು ಈ ಗ್ರಾಮವನ್ನು 'ವ್ಯಾಜ್ಯ ಮುಕ್ತ ಗ್ರಾಮ' ಎಂದು ಅಧಿಕೃತವಾಗಿ ಘೋಷಿಸಿದರು. ನ್ಯಾಯಾಧೀಶರು ಮಂಗಳವಾರ ಅಧಿಕೃತವಾಗಿ ಗ್ರಾಮಕ್ಕೆ ಪ್ರಮಾಣಪತ್ರ ಹಸ್ತಾಂತರಿಸಿದ್ದಾರೆ.
12 ವರ್ಷದಿಂದ ಮದ್ಯ ಮಾರಾಟ ಬಂದ್: ರಾಯಗಟ್‌ಪಲ್ಲಿ ಗ್ರಾಮದಲ್ಲಿ 930 ಜನರಿದ್ದು, 180 ಕುಟುಂಬಗಳು ವಾಸಿಸುತ್ತಿವೆ. ಈ ಗ್ರಾಮದಲ್ಲಿ ವಿವಿಧ ರಾಜಕೀಯ ಪಕ್ಷಗಳ ಸದಸ್ಯರಿದ್ದರೂ, ಅವರ್ಯಾರು ಅಧಿಕಾರಕ್ಕಾಗಿ ಪೈಪೋಟಿ ನಡೆಸುತ್ತಿಲ್ಲ. ಬದಲಿಗೆ ತಮ್ಮ ಗ್ರಾಮದ ಅಭಿವೃದ್ಧಿಯತ್ತ ಗಮನಹರಿಸುತ್ತಿದ್ದಾರೆ. ಗ್ರಾಮದಲ್ಲಿ ಮದ್ಯದಂಗಡಿಗಳು 12 ವರ್ಷಗಳಿಂದ ಮುಚ್ಚಿದ್ದು, ಒಂದು ವೇಳೆ ಯಾರಾದ್ರೂ ಮದ್ಯ ಮಾರಾಟ ಮಾಡುವುದು ಕಂಡು ಬಂದಲ್ಲಿ 5 ಸಾವಿರ ರೂ.ದಂಡ ವಿಧಿಸಲಾಗುತ್ತದೆ.