ಲಖನೌ(ಉತ್ತರಪ್ರದೇಶ) : ಉದ್ಯೋಗ ಕೊಡಿಸುವುದಾಗಿ ನಂಬಿಸಿ ಯುವತಿಯನ್ನು ಹೈದರಾಬಾದ್ನಿಂದ ಉತ್ತರಪ್ರದೇಶದ ಲಕ್ನೋಗೆ ಕರೆಸಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಸಂತ್ರಸ್ತ ಯುವತಿ ನೀಡಿದ ದೂರಿನ ಮೇಲೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮನೀಷ್ ಶರ್ಮ, ತುಕಾರಾಮ್, ಅಭಿಷೇಕ್ ಎಂದು ಗುರುತಿಸಲಾಗಿದೆ.
ಸಂತ್ರಸ್ತ ಯುವತಿಯ ಪ್ರಕಾರ, ಹೈದರಾಬಾದ್ ಮೂಲದ ಮನೀಷ್ ಶರ್ಮ ಹಾಗೂ ಸಂತ್ರಸ್ತ ಯುವತಿ ಸ್ನೇಹಿತರಾಗಿದ್ದಾರೆ. ಈ ಮನೀಷ್ ಯುವತಿಗೆ ಉತ್ತರ ಪ್ರದೇಶದ ಲಕ್ನೋದಲ್ಲಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿದ್ದ. ಈತನ ಮಾತನ್ನು ನಂಬಿದ ಯುವತಿ ಹೈದರಾಬಾದ್ನಿಂದ ನೇರವಾಗಿ ವಿಮಾನದಲ್ಲಿ ಲಕ್ನೋಗೆ ಆಗಮಿಸಿದ್ದಳು.
ಲಕ್ನೋಗೆ ಆಗಮಿಸಿದ ಯುವತಿಯನ್ನು ಆರೋಪಿ ಮನೀಷ್ ಶರ್ಮ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡಿದ್ದ. ಬಳಿಕ ಆಕೆಯನ್ನು ಅಲ್ಲಿಂದ ನೇರವಾಗಿ ಜಾನಕಿಪುರಂನ ತನ್ನ ಮನೆಯ ಪಕ್ಕದಲ್ಲಿರುವ ಸ್ಟಾರ್ ಫೀಲ್ಡ್ ಹೋಟೆಲ್ಗೆ ಕರೆದುಕೊಂಡು ಹೋಗಿದ್ದ. ಬಳಿಕ ಅಲ್ಲಿ ಕೊಠಡಿಯನ್ನು ಕಾಯ್ದಿರಿಸಿ ಅಲ್ಲೇ ಉಳಿಯುವಂತೆ ಸೂಚಿಸಿದ್ದ. ಬಳಿಕ ಮನೀಷ್ ಅಲ್ಲಿಂದ ತೆರಳಿದ್ದ. ನಂತರ ಬುಧವಾರ ಮತ್ತೆ ಯುವತಿ ಇದ್ದ ಹೋಟೆಲ್ಗೆ ಆಗಮಿಸಿದ್ದ ಆರೋಪಿ ಮನೀಷ್, ತನ್ನೊಂದಿಗೆ ಇನ್ನಿಬ್ಬರು ಗೆಳೆಯರನ್ನು ಕರೆತಂದಿದ್ದ. ಈ ಮೂವರು ಸೇರಿ ತನ್ನೊಂದಿಗೆ ಮಾತನಾಡಿ, ನಂತರ ತನ್ನ ಮೇಲೆ ಬಲವಂತವಾಗಿ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ.