ಜಹೀರಾಬಾದ್:ಸರ್ಕಾರಿ ಆಸ್ಪತ್ರೆ ವೈದ್ಯರು ಯುವತಿಯೊಬ್ಬರು ಬದುಕಿರುವಾಗಲೇ ಆಕೆ ‘ಸತ್ತಿದ್ದಾಳೆ’ ಎಂದು ಘೋಷಿಸಿರುವ ಆಘಾತಕಾರಿ ಘಟನೆ ಜಹೀರಾಬಾದ್‌ನಲ್ಲಿ ನಡೆದಿದೆ. ಈ ಘಟನೆ ಗುರುವಾರ ತಡರಾತ್ರಿ ಬೆಳಕಿಗೆ ಬಂದಿದೆ. ಮಾಹಿತಿ ಪ್ರಕಾರ, ಜಹೀರಾಬಾದ್ ಮಂಡಲದ ಚಿನ್ನಾ ಹೈದರಾಬಾದ್ ಮೂಲದ ನರಸಿಂಹುಲು ಮತ್ತು ಶಾರದ ಅವರ ಪುತ್ರಿ ಅರ್ಚನಾ (20)ಗೆ ಇತ್ತೀಚೆಗೆ ವಿವಾಹವಾಗಿತ್ತು.
ಮೇ.7 ರಂದು ಉಪವಾಸ ಮಾಡುತ್ತಿದ್ದ ಅವರು ತನ್ನ ಅತ್ತೆ ಮನೆಯಲ್ಲಿ ಪ್ರಜ್ಞಾಹೀನರಾಗಿ ಬಿದ್ದಿದ್ದರು. ಪತಿ ಪೋಷಕರಿಗೆ ಮಾಹಿತಿ ನೀಡಿ ಜಹೀರಾಬಾದ್ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಜನರಲ್ ಸರ್ಜನ್ ಮತ್ತು ಡ್ಯೂಟಿ ಡಾಕ್ಟರ್ ಸಂತೋಷ್ ಮಹಿಳೆಯನ್ನು ಪರೀಕ್ಷಿಸಿ, ಬಳಿಕ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ. ಅಲ್ಲದೇ ಅವರು ಸತ್ತಿದ್ದಾರೆ ಎಂದು ಪ್ರಮಾಣಪತ್ರವನ್ನು ಸಹ ನೀಡಿ, ರಿಜಿಸ್ಟಾರ್ನಲ್ಲಿ ಸಹಿ ಸಹ ಮಾಡಿಸಿಕೊಂಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.
ನಂತರ, ವೈದ್ಯರ ಮಾತನ್ನು ನಂಬದ ಮಹಿಳೆಯ ಪೋಷಕರು ಅವರನ್ನು ಸಂಗಾರೆಡ್ಡಿ ಜಿಲ್ಲೆಯ ಮತ್ತೊಂದು ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ವೈದ್ಯರು ಮಹಿಳೆ ಜೀವಂತವಾಗಿದ್ದಾರೆ ಎಂದು ಹೇಳಿದರು. ಅಲ್ಲದೇ ಚಿಕಿತ್ಸೆ ನೀಡಲು ಪ್ರಾರಂಭಿಸಿದರು. ಬಳಿಕ ಮೇ. 22 ರಂದು ಡಿಸ್ಚಾರ್ಜ್ ಮಾಡಲಾಯಿತು.