ಬೇಗಂಪೇಟ್ (ತೆಲಂಗಾಣ):ಕರ್ನಾಟಕದಲ್ಲಿ ಧೂಳೆಬ್ಬಿಸಿದ ಬಳಿಕ ತೆಲಂಗಾಣಕ್ಕೆ ಲಗ್ಗೆ ಇಟ್ಟಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ಎಸ್)ಯ ವಿರುದ್ಧ ಟೀಕಾಪ್ರಹಾರ ಮಾಡಿದ್ದಾರೆ. ಸಿಎಂ ಕೆ.ಚಂದ್ರಶೇಖರ್ರಾವ್ ನೇತೃತ್ವದ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ ಮೋದಿ, ರಾಜ್ಯದಲ್ಲಿ ಎಲ್ಲ ಕುಟುಂಬಗಳಿಗೆ ಬೇಕಾದ ಸರ್ಕಾರದ ಅಗತ್ಯವಿದೆ. ಒಂದೇ ಕುಟುಂಬಕ್ಕೆ ಅದು ಸೇರಬಾರದು ಎಂದು ಕುಟುಂಬ ರಾಜಕಾರಣವನ್ನು ಜರಿದಿದ್ದಾರೆ.
ತೆಲಂಗಾಣದಲ್ಲಿ ಜನರು ಬಿಜೆಪಿ ಸರ್ಕಾರವನ್ನು ತರಲು ಬಯಸಿದ್ದಾರೆ. ಕಾರಣ ಇಲ್ಲಿರುವ ಕುಟುಂಬ ರಾಜಕಾರಣವನ್ನು ತೊಡೆದು ಹಾಕಿ, ಪ್ರತಿ ಕುಟುಂಬಕ್ಕೆ ಬೇಕಾಗುವ ಸರ್ಕಾರವನ್ನು ಆರಿಸಬೇಕಿದೆ. ರಾಜ್ಯಕ್ಕೆ ಬೇಕಿರುವುದು ಕುಟುಂಬ ಮೊದಲೆಂಬ ಸರ್ಕಾರವಲ್ಲ, ಜನರು ಮೊದಲೆಂಬ ಸರ್ಕಾರ ಎಂದು ಬೇಗಂಪೇಟ್‌ನಲ್ಲಿ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಅಭಿವೃದ್ಧಿ ಹೊಂದಬೇಕಾದರೆ ನಾವು ಮೊದಲು ಮೂಢನಂಬಿಕೆಯಿಂದ ದೂರವಿರಬೇಕು. ರಾಜ್ಯದಲ್ಲಿ ಪ್ರಸ್ತುತ ಮೂಢನಂಬಿಕೆಯನ್ನು ಪ್ರೋತ್ಸಾಹಿಸುವ ಸರ್ಕಾರವಿದೆ. ಅದನ್ನು ತೊಲಗಿಸಿದಲ್ಲಿ ಮಾತ್ರ ರಾಜ್ಯ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಪ್ರಧಾನಿ ಹೇಳಿದರು.
ವಿವಿಧ ಯೋಜನೆಗಳಿಗೆ ಪಿಎಂ ಚಾಲನೆ:ತೆಲಂಗಾಣಕ್ಕೆ ಭೇಟಿ ನೀಡಿರುವ ಪ್ರಧಾನಿ ಮೋದಿ ಅವರು ರಾಮಗುಂಡಂನಲ್ಲಿ 9,500 ಕೋಟಿ ರೂಪಾಯಿಗಳ ಯೋಜನೆಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು.