ಹೈದರಾಬಾದ್(ತೆಲಂಗಾಣ):ಅಮೆರಿಕದ ಬಹುರಾಷ್ಟ್ರೀಯ ತಂತ್ರಜ್ಞಾನ ಕಂಪನಿ ಕಾರ್ನಿಂಗ್ ಇಂಕ್ ತನ್ನ 'ಗೊರಿಲ್ಲಾ ಗ್ಲಾಸ್' ಉತ್ಪಾದನಾ ಘಟಕವನ್ನು ಸ್ಥಾಪಿಸಲು ತೆಲಂಗಾಣ ರಾಜ್ಯವನ್ನು ಆಯ್ಕೆ ಮಾಡಿದೆ. ಇದು ಭಾರತದಲ್ಲಿ ಮೊದಲ ಹೂಡಿಕೆಯಾಗಿದೆ ಎಂದು ರಾಜ್ಯ ಸರ್ಕಾರ ಶುಕ್ರವಾರ ತಿಳಿಸಿದೆ. ಪ್ರಸ್ತಾವಿತ ಉತ್ಪಾದನಾ ಸೌಲಭ್ಯವು ಸ್ಮಾರ್ಟ್‌ಫೋನ್ ಉದ್ಯಮದಲ್ಲಿ ಮಾರುಕಟ್ಟೆ ನಾಯಕರಿಗೆ ಕವರ್ ಗ್ಲಾಸ್ ಅನ್ನು ತಯಾರಿಸುತ್ತದೆ.
800ಕ್ಕೂ ಹೆಚ್ಚು ಜನರಿಗೆ ಉದ್ಯೋಗ:ಪಾಲುದಾರರೊಂದಿಗೆಕಾರ್ನಿಂಗ್ 934 ಕೋಟಿ ರೂ.ಗಳ ಹೂಡಿಕೆಯನ್ನು ಪ್ರಸ್ತಾಪಿಸಿದೆ. ಇದು ಕಾರ್ಯತಂತ್ರದ ಹೂಡಿಕೆಯಾಗಲಿದೆ. ಜತೆಗೆ ತೆಲಂಗಾಣ ಮತ್ತು ಭಾರತದಲ್ಲಿ ಸ್ಮಾರ್ಟ್‌ಫೋನ್ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. 'ತೆಲಂಗಾಣದಲ್ಲಿ ಪ್ರಸ್ತಾವಿತ ಸೌಲಭ್ಯವು 800ಕ್ಕೂ ಹೆಚ್ಚು ಜನರಿಗೆ ಉದ್ಯೋಗ ಸೃಷ್ಟಿಸುವ ನಿರೀಕ್ಷೆಯಿದೆ' ಎಂದು ತೆಲಂಗಾಣ ಮಾಹಿತಿ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್ ಮತ್ತು ಕೈಗಾರಿಕಾ ಸಚಿವ ಕೆ.ಟಿ. ರಾಮರಾವ್ ತಿಳಿಸಿದ್ದಾರೆ.
ಪ್ರಸ್ತುತ ಅಮೆರಿಕ ಪ್ರವಾಸದಲ್ಲಿರುವ ರಾಮರಾವ್ ಅವರು ಹಿರಿಯ ಉಪಾಧ್ಯಕ್ಷರಾದ ಜಾನ್ ಬೇಯ್ನ್, ಗ್ಲೋಬಲ್ ಆಪರೇಷನ್ಸ್ ಎಕ್ಸಿಕ್ಯೂಟಿವ್ ರವಿಕುಮಾರ್ ಮತ್ತು ಕಾರ್ನಿಂಗ್ ಇಂಕ್‌ನಿಂದ ಸರ್ಕಾರಿ ವ್ಯವಹಾರಗಳ ನಿರ್ದೇಶಕಿ ಸಾರಾ ಕಾರ್ಟ್‌ಮೆಲ್ ಅವರನ್ನು ನ್ಯೂಯಾರ್ಕ್‌ನಲ್ಲಿ ಭೇಟಿಯಾದರು. ಕಳೆದ 9 ವರ್ಷಗಳಲ್ಲಿ ರಾಜ್ಯವು ಕೈಗೊಂಡ ಉಪಕ್ರಮಗಳ ಪರಿಣಾಮವಾಗಿ ತೆಲಂಗಾಣ ಎಲೆಕ್ಟ್ರಾನಿಕ್ಸ್ ಉತ್ಪಾದನೆಯ ಕೇಂದ್ರವಾಗಿ ವೇಗವಾಗಿ ಹೊರಹೊಮ್ಮುತ್ತಿದೆ ಎಂದು ಸಚಿವರು ಹೇಳಿದರು.