ಹೈದರಾಬಾದ್ (ತೆಲಂಗಾಣ): ಭಾರಿ ಮಳೆ ಮುನ್ಸೂಚನೆಯ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ರಾಜ್ಯದ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲು ಸಿಎಂ ಕೆ.ಸಿ.ಚಂದ್ರಶೇಖರ ರಾವ್ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವೆ ಸಬಿತಾ ಇಂದ್ರಾರೆಡ್ಡಿ ರಜೆ ಘೋಷಿಸಿದ್ದಾರೆ. ಇದು ಎಲ್ಲ ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಿಗೂ ಅನ್ವಯಿಸುತ್ತದೆ.
ರಾಜ್ಯಾದ್ಯಂತ ವರುಣ ಆರ್ಭಟ ಮುಂದುವರೆದಿದ್ದು ಶಿಕ್ಷಣ ಸಂಸ್ಥೆಗಳ ಸ್ಥಿತಿಗತಿ ಕುರಿತು ಸರ್ಕಾರ ಉನ್ನತ ಮಟ್ಟದ ಅಧಿಕಾರಿಗಳಿಗೆ ಮಾಹಿತಿ ಕೇಳಿತ್ತು. ಎಲ್ಲ ಜಿಲ್ಲೆಗಳಿಂದ ಮಾಹಿತಿ ಸಂಗ್ರಹಿಸಿದಾಗ ಹಲವೆಡೆ ವಿದ್ಯಾರ್ಥಿಗಳ ಹಾಜರಾತಿ ಕಡಿಮೆಯಾಗಿದ್ದು, ಶಾಲೆಗಳಿಗೆ ಬರಲು ಸಾಧ್ಯವಾಗುತ್ತಿಲ್ಲ ಎಂದು ಜಿಲ್ಲಾ ಶಿಕ್ಷಣಾಧಿಕಾರಿಗಳು ತಿಳಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಕೆಸಿಆರ್, ಸಚಿವೆ ಸಬಿತಾ ಅವರಿಗೆ ರಜೆ ನೀಡುವಂತೆ ಆದೇಶಿಸಿದ್ದಾರೆ.
ಹೈದರಾಬಾದ್ನಲ್ಲಿ ಬುಧವಾರದಿಂದ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ನಗರಕ್ಕೆ ವಲಯವಾರು ಎಚ್ಚರಿಕೆ ನೀಡಲಾಗಿದೆ. ಚಾರ್ಮಿನಾರ್ ವಲಯ, ಖೈರತಾಬಾದ್, ಎಲ್‌ಬಿ ನಗರ ಮತ್ತು ಶೇರಿಂಗಂಪಲ್ಲಿ ವಲಯಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕುಕಟ್ಪಲ್ಲಿ ವಲಯಕ್ಕೆ ಅರೆಂಡ್ ಅಲರ್ಟ್ ಘೋಷಿಸಲಾಗಿದೆ.
ಖಮ್ಮಂ, ನಲ್ಗೊಂಡ, ಸೂರ್ಯಪೇಟ್, ಯಾದಾದ್ರಿ ಭವನಗಿರಿ, ಜನಗಾಮ ಹಾಗೂ ಸಿದ್ದಿಪೇಟೆ ಜಿಲ್ಲೆಯ ಕೆಲವೆಡೆ ಸಹ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಸಿರಿಸಿಲ್ಲ, ಕರೀಂನಗರ, ಪೆದ್ದಪಲ್ಲಿ, ಮಹಬೂಬಾಬಾದ್, ವಾರಂಗಲ್, ಹನುಮಕೊಂಡ, ಮಹಬೂಬನಗರ, ನಾಗರಕರ್ನೂಲ್, ಮೇದಕ್, ಕಾಮರೆಡ್ಡಿ, ಸಂಗಾರೆಡ್ಡಿ, ಮೇಡ್ಚಲ್, ರಂಗಾರೆಡ್ಡಿ, ವಿಕಾರಾಬಾದ್ ಜಿಲ್ಲೆಗಳಲ್ಲಿ ಸಹ ಭಾರಿ ಮಳೆಯಾಗುವ ನಿರೀಕ್ಷೆ ಇದೆ.