ಹೈದರಾಬಾದ್: ಮುಂಬರುವ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ 9 ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಎಐಎಂಐಎಂ (ಆಲ್ ಇಂಡಿಯಾ ಮಜ್ಲಿಸ್- ಎ -ಇತ್ತೆಹಾದುಲ್ ಮುಸ್ಲಿಮೀನ್) ಘೋಷಿಸಿದೆ. ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ವಿವರಗಳನ್ನು ಶುಕ್ರವಾರ ಬಹಿರಂಗಪಡಿಸಿದರು.
''ಚಂದ್ರಾಯನಗುಟ್ಟ ಮತಕ್ಷೇತ್ರದಿಂದ ಅಕ್ಬರುದ್ದೀನ್ ಓವೈಸಿ, ನಾಂಪಲ್ಲಿಯಿಂದ ಮಾಜಿದ್ ಹುಸೇನ್, ಚಾರ್ಮಿನಾರ್‌ನಿಂದ ಮಾಜಿ ಮೇಯರ್ ಜುಲ್ಫಿಕರ್, ಯಾಕತ್‌ಪುರದಿಂದ ಜಾಫರ್ ಹುಸೇನ್ ಮಿರಾಜ್ ಸ್ಪರ್ಧಿಸಲಿದ್ದಾರೆ. ಅಹ್ಮದ್ ಬಲಾಲ್ ಮಲಕಪೇಟ್ದಿಂದ ಮತ್ತು ಕೌಸರ್ ಮೊಯಿನುದ್ದೀನ್ ಕಾರ್ವಾನ್ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಬಹದ್ದೂರ್‌ಪುರ, ಜುಬ್ಲಿ ಹಿಲ್ಸ್ ಮತ್ತು ರಾಜೇಂದ್ರನಗರ ಕ್ಷೇತ್ರಗಳಿಂದ ಸ್ಪರ್ಧಿಸುವ ಅಭ್ಯರ್ಥಿಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು. ಇನ್ನೆರಡು ದಿನಗಳಲ್ಲಿ ಚುನಾವಣಾ ಪ್ರಚಾರ ಆರಂಭಿಸಲಾಗುವುದು'' ಎಂದು ಓವೈಸಿ ಹೇಳಿದರು.
ಇದೇ ವೇಳೆ, ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ''ಉಭಯ ಪಕ್ಷಗಳ ನಾಯಕರು ಸುಳ್ಳಿನ ಕೋಟೆ ಕಟ್ಟಿದ್ದಾರೆ. ತಮ್ಮದು ಜಾತ್ಯತೀತ ಪಕ್ಷಗಳೆಂದು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಬಾಬರಿ ಮಸೀದಿ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರ ಎಲ್ಲರಿಗೂ ಗೊತ್ತು. ಬಾಬರಿ ಮಸೀದಿ ಘಟನೆಯಲ್ಲಿ ಒಬ್ಬನೇ ಒಬ್ಬ ಕಾಂಗ್ರೆಸ್ ನಾಯಕನಿಗೆ ಶಿಕ್ಷೆಯಾಗಿಲ್ಲ. ಮಸೀದಿ ಧ್ವಂಸ ಪ್ರಕರಣದಲ್ಲಿ ಬಿಜೆಪಿ ಮತ್ತು ಆರ್ಎಸ್ಎಸ್ ನಷ್ಟೇ ಕಾಂಗ್ರೆಸ್ ಸಮಪಾಲಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಹಿಂದುತ್ವದ ಸಿದ್ಧಾಂತದ ಮೇಲೆ ಕೆಲಸ ಮಾಡುತ್ತವೆ'' ಎಂದು ಅವರು ಆರೋಪ ಮಾಡಿದರು.