ಕರ್ನಾಟಕ

karnataka

ETV Bharat / bharat

ತೆಲಂಗಾಣ ಚುನಾವಣೆ: ಬಿಜೆಪಿ ತೊರೆದು ಕಾಂಗ್ರೆಸ್​ ಸೇರಿದ ಖ್ಯಾತ ನಟಿ ವಿಜಯಶಾಂತಿ - Vijayashanthi rejoins Congress

Actor Vijayashanthi Rejoins Congress: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಮ್ಮುಖದಲ್ಲಿ ಇಂದು ಮಾಜಿ ಸಂಸದೆ, ಖ್ಯಾತ ನಟಿ ವಿಜಯಶಾಂತಿ ಕಾಂಗ್ರೆಸ್​ಗೆ ಮರು ಸೇರ್ಪಡೆಗೊಂಡಿದ್ದಾರೆ.

Telangana polls: Actor politician Vijayashanthi rejoins Congress
ತೆಲಂಗಾಣ ಚುನಾವಣೆ: ಬಿಜೆಪಿ ತೊರೆದು ಕಾಂಗ್ರೆಸ್​ ಸೇರಿದ ಖ್ಯಾತ ನಟಿ ವಿಜಯಶಾಂತಿ

By ETV Bharat Karnataka Team

Published : Nov 17, 2023, 9:05 PM IST

ಹೈದರಾಬಾದ್​ (ತೆಲಂಗಾಣ): ತೆಲಂಗಾಣದಲ್ಲಿ ವಿಧಾನಸಭಾ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದರೊಂದಿಗೆ ನಾಯಕರ ಪಕ್ಷಾಂತರ ಕೂಡ ಮುಂದುವರೆದಿದೆ. ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವಾಗಲೇ ಖ್ಯಾತ ನಟಿ ವಿಜಯಶಾಂತಿ ಇಂದು ಬಿಜೆಪಿ ತೊರೆದು ಕಾಂಗ್ರೆಸ್​ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.

ರಾಜಸ್ಥಾನ, ಮಧ್ಯಪ್ರದೇಶ, ಮಿಜೋರಾಂ, ಛತ್ತೀಸ್​ಗಢದೊಂದಿಗೆ ತೆಲಂಗಾಣದ ವಿಧಾನಸಭೆಗೂ ಚುನಾವಣೆ ನಡೆಯುತ್ತಿದೆ. ರಾಜ್ಯದಲ್ಲಿ 119 ಸದಸ್ಯ ಬಲದ ವಿಧಾನಸಭೆಗೆ ನ.30ರಂದು ಮತದಾನ ನಡೆಯಲಿದೆ. ಆಡಳಿತಾರೂಢ ಬಿಆರ್​ಎಸ್​, ಕಾಂಗ್ರೆಸ್​ ಹಾಗೂ ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಚುನಾವಣೆ ಘೋಷಣೆಯಾದ ಬಳಿಕ ಸಾಕಷ್ಟು ನಾಯಕರು ಪಕ್ಷಾಂತರ ಶುರು ಮಾಡಿದ್ದರು. ಈಗಾಗಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಗಿದಿದೆ. ಆದರೂ, ನಾಯಕರ ವಲಸೆ ಮಾತ್ರ ನಿಂತಿಲ್ಲ.

ಇಂದು ಮಹತ್ವದ ಬೆಳವಣಿಗೆಯಲ್ಲಿ ಹಿರಿಯ ನಟಿ, ಮಾಜಿ ಸಂಸದೆಯಾದ ವಿಜಯಶಾಂತಿ ಹೈದರಾಬಾದ್​ನಲ್ಲಿ ಕಾಂಗ್ರೆಸ್​ಗೆ ಮರು ಸೇರ್ಪಡೆಗೊಂಡಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಮ್ಮುಖದಲ್ಲಿ ಅವರು ಸೇರ್ಪಡೆಯಾಗಿದ್ದು, ನಟಿಗೆ ಪಕ್ಷದ ಶಾಲು ಹೊದಿಸುವ ಮೂಲಕ ಖರ್ಗೆ ಸ್ವಾಗತಿಸಿದರು. ವಿಜಯಶಾಂತಿ ಅವರೊಂದಿಗೆ ಮಾಜಿ ಬಿಆರ್‌ಎಸ್ ಸಂಸದ ಮತ್ತು ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ಮಂಥ ಜಗನ್ನಾಥಮ್ ಕೂಡ ಕಾಂಗ್ರೆಸ್​ ಸೇರಿದ್ದಾರೆ.

ಚಿತ್ರರಂಗದಲ್ಲಿ 'ಲೇಡಿ ಅಮಿತಾಬ್​' ಎಂದೇ ಹೆಸರು ಮಾಡಿರುವ ವಿಜಯಶಾಂತಿ 2009ರಲ್ಲಿ ರಾಜಕೀಯಕ್ಕೆ ಪ್ರವೇಶಿಸಿದ್ದರು. ನಂತರ ಟಿಆರ್​ಎಸ್​ (ಈಗ ಬಿಆರ್​ಎಸ್) ಪಕ್ಷದಿಂದ ಮೇದಕ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. ಆದರೆ, ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರೊಂದಿಗಿನ ಭಿನ್ನಾಭಿಪ್ರಾಯದಿಂದ ಅವರು ಕಾಂಗ್ರೆಸ್ ಸೇರಿದ್ದರು. ಬಳಿಕ ಅದೇ ಮೇದಕ್ ಕ್ಷೇತ್ರದಿಂದ ಸ್ಪರ್ಧಿಸಿ ವಿಫಲರಾಗಿದ್ದರು.

ಅಲ್ಲಿಂದ 2020ರಲ್ಲಿ ಕಾಂಗ್ರೆಸ್ ತೊರೆದು ವಿಜಯಶಾಂತಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಆದರೆ, ಕಳೆದ ಕೆಲವು ದಿನಗಳಿಂದ ಬಿಜೆಪಿಯಲ್ಲೂ ತೀವ್ರ ಅಸಮಾಧಾನಗೊಂಡಿದ್ದರು. ಕೇಂದ್ರ ಸಚಿವ ಕಿಶನ್ ರೆಡ್ಡಿ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ ನಂತರದಿಂದ ಅವರು ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದರು. ಈ ಹಿನ್ನೆಲೆಯಲ್ಲಿ ವಿಜಯಶಾಂತಿ ಪಕ್ಷ ತೊರೆಯುತ್ತಾರೆ ಎಂಬ ಸುದ್ದಿ ಸಾಕಷ್ಟು ಹರಿದಾಡಿತ್ತು. ಇದರ ಬೆನ್ನಲ್ಲೇ ಬಿಜೆಪಿಗೆ ರಾಜೀನಾಮೆ ಕೂಡ ನೀಡಿದ್ದರು.

ಇಂದು ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್​ ಪ್ರಣಾಳಿಕೆ ಬಿಡುಗಡೆ ಮಾಡಲೆಂದು ಖರ್ಗೆ ಹೈದರಾಬಾದ್​ಗೆ ಬಂದಿದ್ದರು. ಈ ವೇಳೆ ಖರ್ಗೆ ಅವರನ್ನು ವಿಜಯಶಾಂತಿ ಭೇಟಿ ಮಾಡಿ ಮರಳಿ ಕಾಂಗ್ರೆಸ್​ಗೆ ಗೂಡಿಗೆ ಸೇರಿದ್ದಾರೆ. ಈ ಸಂದರ್ಭದಲ್ಲಿ ಕರ್ನಾಟಕದ ಸಚಿವ ಎನ್​.ಎಸ್​.ಬೋಸರಾಜು, ಕರ್ನಾಟಕ ವಿಧಾನ ಪರಿಷತ್ ಸದಸ್ಯ ಯು.ಬಿ.ವೆಂಕಟೇಶ್​, ತೆಲಂಗಾಣ ಕಾಂಗ್ರೆಸ್​ ಉಸ್ತುವಾರಿ ಮಾಣಿಕ್​ ರಾವ್ ಠಾಕ್ರೆ ಉಪಸ್ಥಿತರಿದ್ದರು.

ಇದನ್ನೂ ಓದಿ:ತೆಲಂಗಾಣದಲ್ಲಿ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ: ​ಯುವತಿಯರ ಮದುವೆಗೆ ₹ 1 ಲಕ್ಷ, 10 ಗ್ರಾಂ ಚಿನ್ನ, ರೈತರ ಸಾಲ ಮನ್ನಾ

ABOUT THE AUTHOR

...view details