ಹೈದರಾಬಾದ್(ತೆಲಂಗಾಣ):ಪ್ರವಾದಿ ಮಹಮ್ಮದರ ಕುರಿತು ವಿವಾದಿತ ಹೇಳಿಕೆ ನೀಡಿ ಬಿಜೆಪಿ ಹೈಕಮಾಂಡ್ನಿಂದ ಅಮಾನತುಗೊಂಡಿರುವ ತೆಲಂಗಾಣ ಬಿಜೆಪಿ ಶಾಸಕ ರಾಜಾ ಸಿಂಗ್ ಅವರನ್ನು ಇಲ್ಲಿನ ಪೊಲೀಸರು ಇಂದು ಮತ್ತೆ ಬಂಧಿಸಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ತಮ್ಮ ವಿವಾದಿತ ಹೇಳಿಕೆ ವಿಚಾರವಾಗಿ ಕೋರ್ಟ್ನಿಂದ ಜಾಮೀನು ಪಡೆದುಕೊಂಡು ಹೊರಬಂದಿದ್ದ ರಾಜಾ ಸಿಂಗ್ ಅವರನ್ನು ಭಾರಿ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಮತ್ತೊಮ್ಮೆ ಬಂಧಿಸಿದ್ದಾರೆ.
ರಾಜಾ ಸಿಂಗ್ ವಿರುದ್ಧ ದಾಖಲಾಗಿರುವ ಹಳೆಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ ಎನ್ನಲಾಗ್ತಿದೆ. ಹೈದರಾಬಾದ್ನ ಅವರ ನಿವಾಸದಿಂದಲೇ ಅವರನ್ನು ಅರೆಸ್ಟ್ ಮಾಡಲಾಯಿತು.
ಟಿ ರಾಜಾ ಸಿಂಗ್ ವಿರುದ್ಧ ಈ ವರ್ಷದ ಫೆಬ್ರವರಿ ಮತ್ತು ಏಪ್ರಿಲ್ ತಿಂಗಳಲ್ಲಿ ದಾಖಲಾದ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಆಗಸ್ಟ್ 24ರಂದು ನೋಟಿಸ್ ಜಾರಿ ಮಾಡಲಾಗಿತ್ತು. ಫೆಬ್ರವರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ರಾಜಾ ಸಿಂಗ್, ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಹೀಗಾಗಿ, ಅವರ ವಿರುದ್ಧ ದೂರು ದಾಖಲಾಗಿತ್ತು. ಇದಾದ ಬಳಿಕ ಏಪ್ರಿಲ್ನಲ್ಲಿ ಶೋಭಾಯಾತ್ರೆಯಲ್ಲಿ ಭಾಗಿಯಾಗಿದ್ದಾಗ ಪ್ರಚೋದನಕಾರಿ ಭಾಷಣ ಮಾಡಿದ್ದರು. ಎಐಎಂಐಎಂ ಪಕ್ಷದ ಮುಖಂಡರು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಈ ಹಿನ್ನೆಲೆಯಲ್ಲೂ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.