ಹೈದರಾಬಾದ್:ತೆಲಂಗಾಣದಲ್ಲಿ ಆಡಳಿತದಲ್ಲಿರುವ ಟಿಆರ್ಎಸ್ ಶಾಸಕರ 'ಆಪರೇಷನ್ ಕಮಲ' ಯತ್ನ ಕೇಸ್ ತಿರುವು ಪಡೆದಿದೆ. ಬಂಧಿತರಾಗಿ, ಬಿಡುಗಡೆಯಾಗಿದ್ದ ಮೂವರು ಆರೋಪಿಗಳನ್ನು ಮತ್ತೆ ವಶಕ್ಕೆ ಪಡೆಯಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇದಕ್ಕೂ ಮೊದಲು ಹೈಕೋರ್ಟ್ ಆರೋಪಿಗಳ ಮರುವಶ ಅಥವಾ ಶರಣಾಗತಿಗೆ ಆದೇಶಿಸಿತ್ತು.
ಬಿಜೆಪಿಯ ನಾಲ್ವರು, ಟಿಆರ್ಎಸ್ ಶಾಸಕರನ್ನು ಭೇಟಿ ಮಾಡಿ ಪಕ್ಷಾಂತರಕ್ಕೆ ಆಮಿಷ ಒಡ್ಡಿದ ಬಗ್ಗೆ ದೂರು ದಾಖಲಾಗಿತ್ತು. ಬಳಿಕ ಬಿಜೆಪಿ ಕಡೆಯ ನಾಲ್ವರನ್ನು ಬಂಧಿಸಲಾಗಿತ್ತು. ಸಾಕ್ಷ್ಯಾಧಾರಗಳಿಲ್ಲದೇ ಬಂಧಿಸಲಾಗಿದೆ ಎಂದು ಬಿಜೆಪಿ ವಾದಿಸಿತ್ತು. ಬಳಿಕ ವಿಚಾರಣಾ ನ್ಯಾಯಾಲಯದಲ್ಲಿ ವಾದ ನಡೆದು ಮೂವರನ್ನು ಬಿಡುಗಡೆ ಮಾಡಲಾಗಿತ್ತು.
ಇದನ್ನೂ ಓದಿ:ಟಿಆರ್ಎಸ್ ಶಾಸಕರ ಖರೀದಿ ಯತ್ನ ಆರೋಪ: ಮಹತ್ವದ ಆಡಿಯೋ ಸಂಭಾಷಣೆ ವೈರಲ್
ಇದರ ವಿರುದ್ಧ ಟಿಆರ್ಎಸ್ ಹೈಕೋರ್ಟ್ ಮೆಟ್ಟಿಲೇರಿತ್ತು. ವಿಚಾರಣೆ ನಡೆಸಿದ ಪೀಠ, ಕೆಳ ಹಂತದ ಕೋರ್ಟ್ ಆದೇಶವನ್ನು ರದ್ದುಗೊಳಿಸಿ, ಆಮಿಷ ಒಡ್ಡಿದ ಆರೋಪಿಗಳನ್ನು ಮತ್ತೆ ವಶಕ್ಕೆ ಪಡೆಯಲು ಆದೇಶಿಸಿತ್ತು. ಇಲ್ಲವಾದಲ್ಲಿ ಅವರೇ ಪೊಲೀಸರ ಎದುರು ಶರಣಾಗುವಂತೆಯೂ ಸೂಚಿಸಿತ್ತು.
ಇದೀಗ ಮೂವರು ಆರೋಪಿಗಳನ್ನು ಮರುವಶಕ್ಕೆ ಪಡೆದಿರುವ ಪೊಲೀಸರು, ಭ್ರಷ್ಟಾಚಾರ ನಿಗ್ರಹ ದಳದ ಎದುರು ಹಾಜರುಪಡಿಸಿದ್ದಾರೆ. ಬಳಿಕ ಮೂವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ, ಚಂಚಲಗೂಡ ಜೈಲಿಗೆ ಕಳುಹಿಸಿದ್ದಾರೆ.