ಹೈದರಾಬಾದ್/ಐಜ್ವಾಲ್:ತೆಲಂಗಾಣ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ರೇವಂತ್ ರೆಡ್ಡಿ ಅವರು ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇತ್ತ ಮಿಜೋರಂ ಚುನಾವಣೆಯಲ್ಲಿ ಆಡಳಿತಾರೂಢ ಎಂಎನ್ಎಫ್ ಸೋಲಿಸಿರುವ ಝಡ್ಪಿಎಂನ ಮುಖ್ಯಸ್ಥ ಲಾಲ್ದುಹೋಮ ಅವರು ಶುಕ್ರವಾರ (ಡಿಸೆಂಬರ್ 8) ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ತೆಲಂಗಾಣ ರಚನೆಯಾದ ಬಳಿಕ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಹೊಸ ಹುಮ್ಮಸ್ಸಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದೆ. ಎಲ್ ಬಿ ಸ್ಟೇಡಿಯಂನಲ್ಲಿ ಈ ಅದ್ಧೂರಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಸಿಎಂ ಅಭ್ಯರ್ಥಿ ಆಯ್ಕೆ ಜವಾಬ್ದಾರಿಯನ್ನು ಹೈಕಮಾಂಡ್ಗೆ ವಹಿಸಲಾಗಿತ್ತು. ಮಾತುಕತೆಯ ಬಳಿಕ ಪಿಸಿಸಿ ಅಧ್ಯಕ್ಷರಾಗಿರುವ ರೇವಂತ್ ರೆಡ್ಡಿ ಅವರ ಹೆಸರನ್ನೇ ಎಲ್ಲರೂ ಅಖೈರುಗೊಳಿಸಿದ್ದರು.
ಡಿ.9ರಂದು ಸೋನಿಯಾ ಗಾಂಧಿ ಅವರ ಜನ್ಮದಿನ ಹಾಗೂ ತೆಲಂಗಾಣ ರಾಜ್ಯವಾಗಿ ಘೋಷಣೆ ಮಾಡಿದ ದಿನದಂದೇ ಕಾಂಗ್ರೆಸ್ ಸರ್ಕಾರ ರಚನೆಗೆ ಪ್ಲಾನ್ ಮಾಡಲಾಗಿತ್ತು. ಇದನ್ನು ರೇವಂತ್ ರೆಡ್ಡಿ ಚುನಾವಣಾ ಪ್ರಚಾರದ ವೇಳೆ ಹಲವು ಬಾರಿ ಹೇಳಿದ್ದರು. ಆದರೆ, ಕಾರಣಾಂತರಗಳಿಂದ ಎರಡು ದಿನಗಳ ಮೊದಲೇ ನಡೆಸಲಾಗುತ್ತಿದೆ. ಹೀಗಾಗಿ ಗುರುವಾರ ಮಧ್ಯಾಹ್ನ 1:04 ಗಂಟೆಗೆ ರೇವಂತ್ ರೆಡ್ಡಿ ಪ್ರಮಾಣ ಸ್ವೀಕರಿಸಲಿದ್ದಾರೆ.
ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಎಲ್ಲ ಗಣ್ಯರಿಗೆ ಕಾಂಗ್ರೆಸ್ ಆಹ್ವಾನ ನೀಡಿದೆ. ಸ್ವತಃ ರೇವಂತ್ ರೆಡ್ಡಿ ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಭೇಟಿಯಾಗಿದ್ದರು. ಇಂಡಿಯಾ ಮೈತ್ರಿಕೂಟದ ನಾಯಕರಿಗೂ ಕರೆಯೋಲೆ ನೀಡಲಾಗಿದೆ.
ಸೋನಿಯಾ ಭೇಟಿಯಾಗಿ ಆಹ್ವಾನಿಸಿದ ರೆಡ್ಡಿ:ತೆಲಂಗಾಣ ಮುಖ್ಯಮಂತ್ರಿಯಾಗಿ ನಿಯೋಜಿತವಾಗಿರುವ ರೇವಂತ್ ರೆಡ್ಡಿ ಅವರು ಬುಧವಾರ ದಿಲ್ಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ನಾಯಕಿ ಸೋನಿಯಾ, ರಾಹುಲ್, ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿಯಾಗಿ ಪದಗ್ರಹಣ ಕಾರ್ಯಕ್ರಮಕ್ಕೆ ಆಹ್ವಾನಿಸಿದರು. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಈ ನಡುವೆ ಸೋನಿಯಾ ಗಾಂಧಿ, ರಾಹುಲ್ ಹಾಗೂ ಪ್ರಿಯಾಂಕಾ ಗಾಂಧಿ ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದ್ದು, ಹೈದರಾಬಾದ್ಗೆ ಪ್ರಯಾಣ ಬೆಳೆಸಿದ್ದಾರೆ.
ವಿಶೇಷಚೇತನ ಮಹಿಳೆಗೆ ವಿಶೇಷ ಆಹ್ವಾನ:ರೇವಂತ್ ರೆಡ್ಡಿ ಅವರ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ವಿಶೇಷಚೇತನ ಮಹಿಳೆಯೊಬ್ಬರಿಗೆ ವಿಶೇಷ ಆಹ್ವಾನ ನೀಡಲಾಗಿದೆ. ನಾಂಪಲ್ಲಿ ಕ್ಷೇತ್ರದ ರಜಿನಿ ಎಂಬಾಕೆ ವಿಶೇಷಚೇತನೆಯಾಗಿದ್ದು, ಸ್ನಾತಕೋತ್ತರ ವ್ಯಾಸಂಗ ಮಾಡಿದ್ದಾರೆ. ಉದ್ಯೋಗದ ಹುಡುಕಾಟದಲ್ಲಿರುವ ರಜಿನಿಗೆ ಚುನಾವಣಾ ಪ್ರಚಾರದ ವೇಳೆ ರೇವಂತ್ ರೆಡ್ಡಿ ಅವರು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ, ಸರ್ಕಾರಿ ಹುದ್ದೆ ನೀಡಲಾಗುವುದು ಎಂದು ಆಶ್ವಾಸನೆ ನೀಡಿದ್ದರು. ಅದರಂತೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ರೇವಂತ್ ರೆಡ್ಡಿ ಅವರೇ ಸಿಎಂ ಆಗುತ್ತಿದ್ದಾರೆ.
ನಾಳೆ ಮಿಜೋರಂ ಸಿಎಂ ಪದಗ್ರಹಣ:ಇನ್ನೊಂದೆಡೆ ಮಿಜೋರಂ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿರುವ ಝೋರಾಮ್ ಪೀಪಲ್ಸ್ ಮೂವ್ಮೆಂಟ್ (ಝಡ್ಪಿಎಂ) ಮುಖ್ಯಸ್ಥ ಲಾಲ್ದುಹೋಮ ಅವರು ಶುಕ್ರವಾರ (ಡಿಸೆಂಬರ್ 8) ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಐಜ್ವಾಲ್‌ನ ರಾಜಭವನದಲ್ಲಿ ರಾಜ್ಯಪಾಲ ಹರಿಬಾಬು ಕಂಬಂಪತಿ ಅವರನ್ನು ಭೇಟಿ ಮಾಡಿ ಹೊಸ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದರು. ರಾಜಭವನದಲ್ಲಿ ಬೆಳಿಗ್ಗೆ 11 ಗಂಟೆಗೆ ಪ್ರಮಾಣವಚನ ಕಾರ್ಯಕ್ರಮ ಆಯೋಜಿಸಲಾಗಿದೆ. ಸಪ್ದಂಗ್ ಅವರು ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಸಾಧ್ಯತೆ ಇದೆ.
ಇದನ್ನೂ ಓದಿ:ರೇವಂತ್ ರೆಡ್ಡಿಗೆ ಒಲಿದ ತೆಲಂಗಾಣ ಸಿಎಂ ಪಟ್ಟ: ಹೀಗಿತ್ತು ಆಯ್ಕೆ ಪ್ರಕ್ರಿಯೆ!