ಕರ್ನಾಟಕ

karnataka

ETV Bharat / bharat

ಹೈದರಾಬಾದ್: ಮಗಳೆದುರೇ ಗುಂಡು ಹಾರಿಸಿಕೊಂಡು ಸಚಿವೆಯ ಗನ್‌ಮ್ಯಾನ್‌ ಆತ್ಮಹತ್ಯೆ

Telangana Ministers police escort in-charge suicide: ಹೈದರಾಬಾದ್‌ನಲ್ಲಿ ಸಚಿವೆ ಸಬಿತಾ ಇಂದ್ರಾರೆಡ್ಡಿ ಅವರ ಪೊಲೀಸ್​ ಬೆಂಗಾವಲು ಪಡೆಯ ಉಸ್ತುವಾರಿ, ಎಎಸ್​ಐ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Telangana Minister Sabitha Indra Reddys police escort incharge shoots himself dead
ಹೈದರಾಬಾದ್​ನಲ್ಲಿ ಸಚಿವೆ ಇಂದ್ರಾರೆಡ್ಡಿ ಪೊಲೀಸ್​ ಬೆಂಗಾವಲು ಪಡೆಯ ಉಸ್ತುವಾರಿ ಆತ್ಮಹತ್ಯೆ

By PTI

Published : Nov 5, 2023, 12:44 PM IST

ಹೈದರಾಬಾದ್​ (ತೆಲಂಗಾಣ): ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿರುವ ತೆಲಂಗಾಣದಲ್ಲಿ ಇಂದು ಬೆಳಿಗ್ಗೆ ಪೊಲೀಸ್​ ಅಧಿಕಾರಿಯೊಬ್ಬರು ಸಾವಿಗೆ ಶರಣಾಗಿದ್ದಾರೆ. ಸಚಿವೆ ಸಬಿತಾ ಇಂದ್ರಾರೆಡ್ಡಿ ಅವರ ಪೊಲೀಸ್​ ಬೆಂಗಾವಲು ಪಡೆಯ ಉಸ್ತುವಾರಿಯಾಗಿದ್ದ ಸಹಾಯಕ ಸಬ್​ ಇನ್ಸ್​​ಪೆಕ್ಟರ್​​ (ಎಎಸ್​ಐ) ಮೊಹಮ್ಮದ್​​ ಫಜಲ್​ ಅಲಿ (59) ತಮ್ಮ ಸರ್ವೀಸ್​ ಪಿಸ್ತೂಲ್​ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜಧಾನಿ ಹೈದರಾಬಾದ್​ನ ಅಮೀರ್​ಪೇಟ್​​ ಪ್ರದೇಶದ ಶ್ರೀನಗರ ಕಾಲೋನಿಯ ಹೋಟೆಲೊಂದರ ಸಮೀಪ, ತಮ್ಮ ಮಗಳೆದುರೇ ಫಜಲ್​ ಅಲಿ ಗುಂಡು ಹಾರಿಸಿಕೊಂಡರು ಎಂದು ತಿಳಿದು ಬಂದಿದೆ. ಬೆಳಿಗ್ಗೆ 7 ಗಂಟೆ ಸುಮಾರಿಗೆ ಕರ್ತವ್ಯಕ್ಕೆ ತೆರಳುತ್ತಿದ್ದಾಗ ಮಗಳನ್ನು ಕರೆದುಕೊಂಡು ಬಂದಿದ್ದರು. ಇಲ್ಲಿನ ಮಣಿಕಂಠ ಹೋಟೆಲ್​ ಸಮೀಪ ನಿಂತು ಮಗಳೊಂದಿಗೆ ಮಾತನಾಡುತ್ತಿದ್ದರು. ಈ ವೇಳೆ, ಏಕಾಏಕಿ ಸರ್ವೀಸ್ ಪಿಸ್ತೂಲ್​ನಿಂದ ಗುಂಡು ಹಾರಿಸಿಕೊಂಡಿದ್ದಾರೆ. ಈ ವಿಷಯ ತಿಳಿದ ಕೂಡಲೇ ಸ್ಥಳೀಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದರು.

ಎಎಸ್​ಐ ಮೃತದೇಹವನ್ನು ಉಸ್ಮಾನಿಯ ಆಸ್ಪತ್ರೆಗೆ ರವಾನಿಸಲಾಗಿದೆ. ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ. ಘಟನಾ ಸ್ಥಳಕ್ಕೆ ಸಚಿವೆ ಸಬಿತಾ ಇಂದ್ರಾರೆಡ್ಡಿ, ಪಶ್ಚಿಮ ವಿಭಾಗದ ಉಪ ಪೊಲೀಸ್​ ಆಯುಕ್ತ ಜೋಯಲ್​ ಡೇವಿಸ್​ ಹಾಗೂ ಹಿರಿಯ ಪೊಲೀಸ್​ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಡಿಸಿಪಿ ಡೇವಿಸ್ ಪ್ರತಿಕ್ರಿಯಿಸಿ, ''ಫಜಲ್​ ಅಲಿ ಅವರನ್ನು ಸಚಿವೆ ಸಬಿತಾ ಇಂದ್ರಾರೆಡ್ಡಿ ಅವರ ಎಸ್ಕಾರ್ಟ್​​ ಉಸ್ತುವಾರಿಯನ್ನಾಗಿ ನಿಯೋಜಿಸಲಾಗಿತ್ತು. ಅವರು ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿಯಾಗಿದ್ದರು. ಬೆಳಿಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಮಯದಲ್ಲಿ ಅವರ ಪುತ್ರಿ ಕೂಡ ಇದ್ದರು. ವೈಯಕ್ತಿಕ ವಿಷಯಗಳ ಬಗ್ಗೆ ಮಗಳೊಂದಿಗೆ ಚರ್ಚೆ ಮಾಡಿ, ಆಕೆಯ ಮುಂಭಾಗದಲ್ಲೇ ಗುಂಡು ಹಾರಿಸಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ'' ಎಂದು ತಿಳಿಸಿದ್ದಾರೆ.

ಇದೇ ವೇಳೆ, ಎಎಸ್ಐ ಮಗಳನ್ನು ಡಿಸಿಪಿ ಭೇಟಿಯಾಗಿ ಘಟನೆ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ''ತಮ್ಮ ತಂದೆ ಖಾಸಗಿ ಬ್ಯಾಂಕ್​ನಲ್ಲಿ ಸಾಲ ತೆಗೆದುಕೊಂಡಿದ್ದರು. ಆದರೆ, ಸಾಲಕ್ಕೆ ಹೆಚ್ಚಿನ ಹಣವನ್ನು ಬ್ಯಾಂಕ್‌ನವರು ವಸೂಲಿ ಮಾಡುತ್ತಿದ್ದಾರೆ ಎಂದು ಚಿಂತೆಗೀಡಾಗಿದ್ದರು'' ಎಂಬುದಾಗಿ ಮಗಳು ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ವೈಯಕ್ತಿಕ ಕಾರಣದಿಂದ ಫಜಲ್​ ಅಲಿ ಕಠಿಣ ನಿರ್ಧಾರಕ್ಕೆ ಬಂದಿದ್ದರು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

119 ಸದಸ್ಯ ಬಲದ ತೆಲಂಗಾಣ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿದೆ. ನವೆಂಬರ್ 30ರಂದು ಮತದಾನ ನಡೆಯಲಿದ್ದು, ಡಿಸೆಂಬರ್​ 3ರಂದು ಫಲಿತಾಂಶ ಪ್ರಕಟವಾಗಿದೆ. ಆಡಳಿತಾರೂಢ ಬಿ​ಆರ್​ಎಸ್​ ನಾಯಕಿ, ಹಾಲಿ ಸಚಿವೆ ಸಬಿತಾ ಇಂದ್ರಾರೆಡ್ಡಿ ಈ ಹಿಂದೆ ವೈ.ಎಸ್.ರಾಜಶೇಖರ್​ ರೆಡ್ಡಿ ನೇತೃತ್ವದ ಕಾಂಗ್ರೆಸ್​ ಸರ್ಕಾರದಲ್ಲಿ ಗೃಹ ಖಾತೆಯನ್ನು ನಿರ್ವಹಿಸಿದ್ದರು.

ಇದನ್ನೂ ಓದಿ:ಬೆಂಗಳೂರಿನಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕಿ ಬರ್ಬರ ಹತ್ಯೆ!

ABOUT THE AUTHOR

...view details