ಹೈದರಾಬಾದ್ (ತೆಲಂಗಾಣ): ಆಂಧ್ರಪ್ರದೇಶದ ಪ್ರಸಿದ್ಧ ತಿರುಪತಿ ತಿಮ್ಮಪ್ಪ ದೇವಾಲಯದ ಮಾದರಿಯಲ್ಲಿ ತೆಲಂಗಾಣದಲ್ಲಿ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನ ನಿರ್ಮಾಣವಾಗುತ್ತಿದ್ದು, ದೇಗುಲದ ಗೋಪುರಕ್ಕೆ ಚಿನ್ನದ ಲೇಪನ ಮಾಡಿಸಲು ಸಚಿವರೊಬ್ಬರು ಬರೋಬ್ಬರಿ 1.75 ಕೋಟಿ ರೂ. ದೇಣಿಗೆ ನೀಡಿದ್ದಾರೆ.
ತೆಲಂಗಾಣದ ಯಾದಾದ್ರಿ ಜಿಲ್ಲೆಯಲ್ಲಿ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನವನ್ನು ತಿರುಮಲ ದೇಗುಲದ ಮಾದರಿಯಲ್ಲಿ ರಾಜ್ಯ ಸರ್ಕಾರವು ನಿರ್ಮಿಸುತ್ತಿದೆ. ಸುಮಾರು 1,400 ಎಕರೆ ಪ್ರದೇಶದಲ್ಲಿ ದೇವಸ್ಥಾನ, ದೇಗುಲದ ಅರ್ಚರು-ಸಿಬ್ಬಂದಿ ಹಾಗೂ ಪ್ರವಾಸಿಗರು ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗ್ತಿದೆ. ತೆಲಂಗಾಣದ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಮಲ್ಲಾ ರೆಡ್ಡಿ ಅವರು ತಮ್ಮ ಮೆಡ್ಚಲ್ ವಿಧಾನಸಭಾ ಕ್ಷೇತ್ರದ ವತಿಯಿಂದ 1 ಕೋಟಿ ರೂ. ನಗದು ಹಾಗೂ 75 ಲಕ್ಷ ರೂ. ಚೆಕ್ ನೀಡಿದ್ದಾರೆ.