ಹೈದರಾಬಾದ್: ಅಮೇಥಿ ಲೋಕಸಭಾ ಕ್ಷೇತ್ರವನ್ನು ಗೆಲ್ಲಲಾಗದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ರಾಷ್ಟ್ರೀಯ ಪಕ್ಷದ ಮಹತ್ವಾಕಾಂಕ್ಷೆಗಳನ್ನು ಲೇವಡಿ ಮಾಡುತ್ತಿದ್ದಾರೆ ಎಂದು ಸಚಿವ ಕೆ.ಟಿ. ರಾಮರಾವ್ ಹರಿಹಾಯ್ದಿದ್ದಾರೆ.
ಇದಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ ಕೆಟಿಆರ್ ತೆಲಂಗಾಣದಲ್ಲಿ ಭಾರತ್ ಜೋಡೋ ಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ನಾಯಕರಿಗೆ ಯಾವುದೇ ರೀತಿಯಲ್ಲಿ ಕನಸು ಕಾಣುವ ಮತ್ತು ಕಲ್ಪಿಸಿಕೊಳ್ಳುವ ಹಕ್ಕಿದೆ. ಬಿಆರ್‌ಎಸ್ ಅನ್ನು ಅಪಹಾಸ್ಯ ಮಾಡುವ ಮೊದಲು ರಾಹುಲ್ ಗಾಂಧಿ ಅಮೇಥಿಯ ಜನರಿಗೆ ಮತ ಹಾಕುವಂತೆ ಕೇಳಿಕೊಳ್ಳಲಿ. ಪ್ರಧಾನಿಯಾಗುವ ಮುನ್ನ ಸ್ಥಳೀಯ ಜನರ ಮನವೊಲಿಸಿ ಸಂಸದರಾಗಿ ಆಯ್ಕೆಯಾಗಿ ಎಂದು ತಿರುಗೇಟು ನೀಡಿದ್ದಾರೆ.
ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಆರಂಭಿಸುವ ಮೂಲಕ ಮುಖ್ಯಮಂತ್ರಿ ಕೆಸಿಆರ್ ಅವರು ರಾಷ್ಟ್ರ ರಾಜಕಾರಣಕ್ಕೆ ಎಂಟ್ರಿ ಕೊಡುವ ಕುರಿತು ಸೋಮವಾರ(ಅ.31)ರಂದು ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, 'ಟಿಆರ್‌ಎಸ್ ಕಾಂಗ್ರೆಸ್ ಮೈತ್ರಿ ಪ್ರಶ್ನೆಯೇ ಇಲ್ಲ. ಕೆಸಿಆರ್ ರಾಷ್ಟ್ರೀಯ ಪಕ್ಷ ಸ್ಥಾಪಿಸಲು ಬಯಸಿದರೆ ಅದು ಉತ್ತಮ ಸಂಗತಿ. ಅವರು ಒಂದು ವೇಳೆ ವಿಶ್ವಮಟ್ಟದ ಪಕ್ಷ ಸ್ಥಾಪಿಸಲು ಬಯಸಿದರೆ ಚೀನಾ ಅಥವಾ ಇಂಗ್ಲೆಂಡ್ನಲ್ಲಿ ಸ್ಪರ್ಧಿಸಲಿ. ಆದರೆ ಬಿಜೆಪಿ ಸಿದ್ಧಾಂತವನ್ನು ಕಾಂಗ್ರೆಸ್ ಸಿದ್ಧಾಂತದಿಂದ ಮಾತ್ರ ಸೋಲಿಸಲು ಸಾಧ್ಯ' ಎಂದು ಹೇಳಿದ್ದರು. ರಾಹುಲ್ ಅವರ ಈ ಹೇಳಿಕೆಯನ್ನು ಟಿಆರ್‌ಎಸ್ ಪಕ್ಷ ತೀವ್ರವಾಗಿ ಖಂಡಿಸಿದೆ.
ಇದನ್ನೂ ಓದಿ..ಟಿಆರ್‌ಎಸ್ - ಕಾಂಗ್ರೆಸ್ ಮೈತ್ರಿ ಪ್ರಶ್ನೆಯೇ ಇಲ್ಲ: ರಾಹುಲ್ ಗಾಂಧಿ