ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಹಾಗೂ ಖ್ಯಾತ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿಗೆ ಇಮೇಲ್ ಮೂಲಕ ಬೆದರಿಕೆ ಸಂದೇಶ ಕಳುಹಿಸಿದ್ದ ಆರೋಪದ ಮೇಲೆ ತೆಲಂಗಾಣ ಮೂಲದ ವ್ಯಕ್ತಿಯನ್ನು ಮಹಾರಾಷ್ಟ್ರ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಸಂದೇಶದಲ್ಲಿ ಬೆದರಿಕೆ ಅಲ್ಲದೇ ಕೋಟಿ ಕೋಟಿ ಹಣಕ್ಕೆ ಬೇಡಿಕೆ ಇಡಲಾಗಿತ್ತು. ಈ ಹಿನ್ನೆಲೆಯಲ್ಲಿ 19 ವರ್ಷದ ಗಣೇಶ್ ವನಪರ್ಧಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಕ್ಟೋಬರ್ 28 ಮತ್ತು ನವೆಂಬರ್ 3ರ ನಡುವೆ ಮುಖೇಶ್ ಅಂಬಾನಿಗೆ 3 ಬೆದರಿಕೆಯ ಸಂದೇಶ ಬಂದಿದ್ದು, ಇದನ್ನು ಕಳುಹಿಸಿದವನು ತನ್ನನು ತಾನು 'ಶಾದಾಬ್ ಖಾನ್' ಎಂದು ಪರಿಚಯಿಸಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈತ 400 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದ. ಹಿಂದಿನ ಇಮೇಲ್‌ಗಳನ್ನು ನಿರ್ಲಕ್ಷಿಸಿದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಮುಖೇಶ್ ಅಂಬಾನಿಗೆ ಸಂದೇಶ ಕಳುಹಿಸಿ ಎಚ್ಚರಿಕೆ ನೀಡಿದ್ದ. ಇದೀಗ ಮುಂಬೈ ಪೊಲೀಸರು ಆರೋಪಿ ವನಪರ್ಧಿಯನ್ನು ಬಂಧಿಸಿ ಶನಿವಾರ ಮುಂಬೈನ ಕೆಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಯನ್ನು ನವೆಂಬರ್ 8 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಹಿಂದಿನ ಇಮೇಲ್‌ಗಳನ್ನು ನಿರ್ಲಕ್ಷಿಸಿದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಹೊಸ ಬೆದರಿಕೆ ಇಮೇಲ್‌ಗಳು ಬಂದ ಕೆಲವೇ ದಿನಗಳಲ್ಲಿ ಆರೋಪಿಯ ಬಂಧನವಾಗಿದೆ.