ಹೈದರಾಬಾದ್ (ತೆಲಂಗಾಣ):ತೆಲಂಗಾಣದ ಗೃಹ ಸಚಿವ ಮೊಹಮ್ಮದ್ ಅಲಿ ಸಾರ್ವಜನಿಕ ವೇದಿಕೆ ಮೇಲೆ ತಮ್ಮ ಗನ್‌ಮ್ಯಾನ್ ಕಪಾಳಕ್ಕೆ ಬಾರಿಸಿರುವ ಘಟನೆ ಇಂದು ನಡೆಯಿತು. ಹೂಗುಚ್ಛ ಕೊಡಲು ತಡ ಮಾಡಿದ್ದಕ್ಕೆ ಕೋಪಗೊಂಡು ಮಂತ್ರಿ ಹೊಡೆದಿದ್ದಾರೆ ಎಂದು ಹೇಳಲಾಗಿದೆ.
ಇಂದಿನಿಂದ ತೆಲಂಗಾಣ ಸರ್ಕಾರವು ಶಾಲಾ ಮಕ್ಕಳ 'ಮುಖ್ಯಮಂತ್ರಿ ಉಪಹಾರ' ಯೋಜನೆ ಆರಂಭಿಸಿದೆ. ಹೈದರಾಬಾದ್ನ ಅಮೀರ್ಪೇಟ್ ವಿಭಾಗದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಈ ಯೋಜನೆಗೆ ಚಾಲನೆ ನೀಡಲು ಮೊಹಮ್ಮದ್ ಅಲಿ ಹಾಗೂ ಮತ್ತೊಬ್ಬ ಸಚಿವ ತಲಸನಿ ಶ್ರೀನಿವಾಸ್ ಯಾದವ್ ತೆರಳಿದ್ದರು. ಇದೇ ವೇಳೆ, ಇಂದು ಸಚಿವ ಶ್ರೀನಿವಾಸ್ ಯಾದವ್ ಅವರ ಜನ್ಮದಿನವೂ ಇರುವುದರಿಂದ ನೇರವಾಗಿ ಸಿಕ್ಕ ಅವರಿಗೆ ಸಚಿವ ಅಲಿ ಶುಭ ಕೋರಲು ಮುಂದಾಗಿದ್ದರು.
ಈ ಸಮಯದಲ್ಲಿ ಹೂಗುಚ್ಛವನ್ನು ತಂದುಕೊಡಲು ಸಿಬ್ಬಂದಿ ತಡ ಮಾಡಿದ್ದಾರೆ. ಇದರಿಂದ ತಾಳ್ಮೆ ಕಳೆದುಕೊಂಡ ಅಲಿ ತಮ್ಮ ಸಮೀಪದಲ್ಲಿ ನಿಂತಿದ್ದ ಗನ್ಮ್ಯಾನ್ನ ಕಪಾಳಕ್ಕೆ ಬಾರಿಸಿದರು. ಸಾರ್ವಜನಿಕವಾಗಿಯೇ ಗೃಹ ಸಚಿವರು ಕೈ ಮಾಡಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಹೀಗಾಗಿ ತುಂಬಾ ಶಾಂತ ಸ್ವಭಾವಕ್ಕೆ ಹೆಸರಾದ ಅಲಿ ಇದೀಗ ಟೀಕೆಗೆ ಗುರಿಯಾಗಿದ್ದಾರೆ.
'ಮುಖ್ಯಮಂತ್ರಿ ಉಪಹಾರ' ಯೋಜನೆ ಬಗ್ಗೆ ಮಾಹಿತಿ:ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವುದರ ಜೊತೆಗೆ ಶಾಲೆ ಬಿಡುವ ಮಕ್ಕಳ ಸಂಖ್ಯೆ ಕಡಿಮೆ ಮಾಡುವ ಉದ್ದೇಶದಿಂದ ತೆಲಂಗಾಣ ಸರ್ಕಾರ 'ಮುಖ್ಯಮಂತ್ರಿ ಉಪಹಾರ' ಯೋಜನೆ ಜಾರಿಗೆ ತಂದಿದೆ. ಸಿಕಂದರಾಬಾದ್‌ನ ಪಶ್ಚಿಮ ಮಾರೆಡ್‌ಪಲ್ಲಿ ಶಾಲೆಯಲ್ಲಿ ಸಚಿವ ಕೆ.ಟಿ.ರಾಮರಾವ್ (ಕೆಟಿಆರ್), ರಂಗಾರೆಡ್ಡಿ ಜಿಲ್ಲೆಯ ರಿಯಾವಿಲಾಲ ಶಾಲೆಯಲ್ಲಿ ಶಿಕ್ಷಣ ಸಚಿವೆ ಸಬಿತಾ ಇಂದ್ರಾರೆಡ್ಡಿ ಈ ಯೋಜನೆಗೆ ಔಪಚಾರಿಕವಾಗಿ ಚಾಲನೆ ನೀಡಿದರು. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಸಚಿವರು, ಜನಪ್ರತಿನಿಧಿಗಳು ಯೋಜನೆಗೆ ಚಾಲನೆ ನೀಡಿ ವಿದ್ಯಾರ್ಥಿಗಳೊಂದಿಗೆ ಉಪಹಾರ ಸೇವಿಸಿದರು.
ಈ ಯೋಜನೆಯ ಮೂಲಕ 27,147 ಶಾಲೆಗಳಲ್ಲಿ ಒಂದರಿಂದ ಹತ್ತನೇ ತರಗತಿವರೆಗೆ ಓದುತ್ತಿರುವ ಸುಮಾರು 23 ಲಕ್ಷ ವಿದ್ಯಾರ್ಥಿಗಳು ಪ್ರಯೋಜನ ಪಡೆಯಲಿದ್ದಾರೆ. ಪ್ರತಿದಿನ ಶಾಲೆ ಪ್ರಾರಂಭವಾಗುವ 45 ನಿಮಿಷಗಳ ಮೊದಲು ಉಪಹಾರ ನೀಡಲಾಗುತ್ತದೆ. ದಸರಾ ರಜೆಯ ನಂತರ ಎಲ್ಲ ಶಾಲೆಗಳಲ್ಲಿ ಈ ಯೋಜನೆ ಜಾರಿಯಾಗಲಿದೆ ಎಂದು ಶಿಕ್ಷಣ ಸಚಿವೆ ಸಬಿತಾ ಇಂದ್ರಾರೆಡ್ಡಿ ತಿಳಿಸಿದ್ದಾರೆ. ಯೋಜನೆ ಅನುಷ್ಠಾನದ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ನಗರ ಪ್ರದೇಶದಲ್ಲಿ ಪೌರಾಯುಕ್ತರು ಮತ್ತು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿಗಳಿಗೆ ವಹಿಸಲಾಗಿದೆ ಎಂದು ಹೇಳಿದ್ದಾರೆ.
ಉಪಹಾರದ ಮೆನು ಹೀಗಿದೆ..