ಹೈದರಾಬಾದ್ :ಐಎಎಸ್ ಅಧಿಕಾರಿ ಸ್ಮಿತಾ ಸಬರ್ವಾಲ್ ಅವರು ಸರ್ಕಾರದ ಖಜಾನೆಯಿಂದ ಪಡೆದಿದ್ದ 15 ಲಕ್ಷ ರೂಪಾಯಿಯನ್ನು ಮರುಪಾವತಿಸುವಂತೆ ತೆಲಂಗಾಣ ಹೈಕೋರ್ಟ್ ಸೂಚನೆ ನೀಡಿದೆ. 90 ದಿನಗಳಲ್ಲಿ ಹಣವನ್ನು ಪಾವತಿ ಮಾಡಲು ಅಧಿಕಾರಿಗೆ ಸೂಚನೆ ನೀಡಿದ್ದು, ಒಂದು ವೇಳೆ ನಿಗದಿತ ವೇಳೆಯಲ್ಲಿ ಹಣ ಪಾವತಿ ಮಾಡಲು ಸಾಧ್ಯವಾಗದಿದ್ದರೆ, ಮುಂದಿನ 30 ದಿನಗಳಲ್ಲಿ ಹಣ ವಸೂಲಿ ಮಾಡುವಂತೆ ರಿಜಿಸ್ಟ್ರಾರ್ ಜನರಲ್ಗೆ ಸೂಚಿಸಲು ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶಿಸಿದೆ.
ನಡೆದಿದ್ದೇನು?: 2015ರಲ್ಲಿ ಐಎಎಸ್ ಅಧಿಕಾರಿ ಸ್ಮಿತಾ ಸಬರ್ವಾಲ್ ಮತ್ತು ಅವರ ಪತಿ ಹೋಟೆಲೊಂದರಲ್ಲಿ ನಡೆದ ಫ್ಯಾಷನ್ ಶೋನಲ್ಲಿ ಭಾಗಿಯಾಗಿದ್ದರು. ಈ ಕಾರ್ಯಕ್ರಮವನ್ನು ಆಧರಿಸಿ ನಿಯತಕಾಲಿಕೆಯೊಂದು 'ನೋ ಬೋರಿಂಗ್ ಬಾಬು' ಎಂಬ ಶೀರ್ಷಿಕೆಯ ಅಡಿಯಲ್ಲಿ ಲೇಖನ ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ಸ್ಮಿತಾ ಸಬರ್ವಾಲ್ ಅವರು ನಿಯತಕಾಲಿಕೆಯ ವಿರುದ್ಧ 10 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದರು.
ಈ ಮೊಕದ್ದಮೆಗಾಗಿ ನ್ಯಾಯಾಲಯದ ಶುಲ್ಕವಾಗಿ 9.75 ಲಕ್ಷ ರೂಪಾಯಿಯನ್ನು ಪಾವತಿಸಲು ತೆಲಂಗಾಣ ಸರ್ಕಾರಕ್ಕೆ ಪತ್ರ ಬರೆದಿದ್ದರು. ಆಗ ಸರ್ಕಾರ 9.75 ಲಕ್ಷ ರೂಪಾಯಿ ನ್ಯಾಯಾಲಯ ಶುಲ್ಕ ಸೇರಿದಂತೆ, ಇತರ ವೆಚ್ಚ ಸೇರಿದಂತೆ 15 ಲಕ್ಷ ರೂಪಾಯಿಯನ್ನು ಬಿಡುಗಡೆ ಮಾಡಿತ್ತು. ಸ್ಮಿತಾ ಸಬರ್ವಾಲ್ ತಮ್ಮ ವೈಯಕ್ತಿಕ ವಿಚಾರಕ್ಕೆ ಸರ್ಕಾರದಿಂದ ಹಣವನ್ನು ಮಂಜೂರು ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ವಿ.ವಿದ್ಯಾಸಾಗರ್ ಮತ್ತು ಕೆ.ಈಶ್ವರ ರಾವ್ ಎಂಬುವರು ಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.