ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಅಭಿನಯದ 'ಝುಂಡ್' ಚಿತ್ರದ ಬಿಡುಗಡೆಗೆ ತಡೆ ನೀಡುವಂತೆ ಕೋರಿ ನಿರ್ಮಾಪಕರೊಬ್ಬರು ಸಲ್ಲಿಸಲಾದ ಅರ್ಜಿಯ ಬಗ್ಗೆ ತೆಲಂಗಾಣ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ತುರ್ತು ಅರ್ಜಿ ಸಲ್ಲಿಸಿ ಸಮಯ ವ್ಯರ್ಥ ಮಾಡಿದ ಕಾರಣದಿಂದಾಗಿ 10 ಲಕ್ಷ ರೂಪಾಯಿ ದಂಡ ಪಾವತಿಸುವಂತೆ ಹೈಕೋರ್ಟ್ ಅರ್ಜಿದಾರರಿಗೆ ಸೂಚಿಸಿದೆ.
ದಂಡದ ಮೊತ್ತವನ್ನು ಪ್ರಧಾನಮಂತ್ರಿಗಳ ಕೋವಿಡ್ ಸಹಾಯ ನಿಧಿಗೆ 30 ದಿನಗಳೊಳಗೆ ಠೇವಣಿ ಮಾಡುವಂತೆ ಮತ್ತು ಪಾವತಿ ಮಾಡದಿದ್ದಲ್ಲಿ ವಸೂಲಿ ಮಾಡುವಂತೆ ಹೈದರಾಬಾದ್ ಜಿಲ್ಲಾಧಿಕಾರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಹೈದರಾಬಾದ್ನ ನಂದಿ ಚಿನ್ನಿಕುಮಾರ್ ಎಂಬುವವರು ಝುಂಡ್ ಸಿನಿಮಾ ಬಿಡುಗಡೆಗೆ ತಡೆ ನೀಡುವಂತೆ ಅರ್ಜಿಯನ್ನು ಸಲ್ಲಿಸಿದ್ದರು. ಈ ಸಿನಿಮಾ ಗ್ಯಾಂಗ್ ಸ್ಟರ್ ಓರ್ವ ಫುಟ್ಬಾಲ್ ಕೋಚ್ ಆಗಿ ಪರಿವರ್ತನೆಯಾಗಿದ್ದ ಅಖಿಲೇಶ್ ಪೌಲ್ ಎಂಬಾತನ ಜೀವನಚರಿತ್ರೆಯಾಗಿದೆ.
ಅಖಿಲೇಶ್ ಪೌಲ್ ಬಯೋಪಿಕ್ ಮೇಲೆ ತನಗೆ ಹಕ್ಕು ಇದೆ ಎಂದು ವಾದಿಸಿ, ಇದೇ ವಿಚಾರವಾಗಿ ಟಿ-ಸಿರೀಸ್ನೊಂದಿಗೆ ರಾಜಿ ಮಾಡಿಕೊಂಡಿದ್ದ ನಂದಿ ಚಿನ್ನಿಕುಮಾರ್ ಐದು ಕೋಟಿ ರೂಪಾಯಿಯನ್ನು ತೆಗೆದುಕೊಂಡಿದ್ದು, ನಂತರ ರಾಜಿ ಒಪ್ಪಂದವನ್ನು ರದ್ದುಗೊಳಿಸಿ, ಚಿತ್ರ ಬಿಡುಗಡೆಗೆ ತಡೆ ಕೋರಿ ಅರ್ಜಿ ಸಲ್ಲಿಸಿರುವುದರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ.
ನಡೆದಿದ್ದೇನು?: ನಂದಿ ಚಿನ್ನಿಕುಮಾರ್ 'ಝುಂಡ್' ಚಿತ್ರಕ್ಕೆ ತಡೆಯಾಜ್ಞೆ ತರಬೇಕೆಂದು ವಿಚಾರಣಾ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ವೇಳೆ ಟಿ- ಸಿರೀಸ್ನೊಂದಿಗೆ ರಾಜಿ ಒಪ್ಪಂದ ಮಾಡಿಕೊಂಡು ಐದು ಕೋಟಿ ರೂಪಾಯಿಯನ್ನು ಪಡೆದುಕೊಂಡಿದ್ದರು. ಕೆಲವೇ ಕೆಲವು ದಿನಗಳ ಹಿಂದೆ ಚಿತ್ರ ಬಿಡುಗಡೆಯಾಗಬಾರದೆಂದು ಆಗ್ರಹಿಸಿ, ಟಿ-ಸಿರೀಸ್ನೊಂದಿಗೆ ಮಾಡಿಕೊಂಡಿದ್ದ ಒಪ್ಪಂದವನ್ನು ರದ್ದು ಮಾಡಬೇಕೆಂದು ಕೋರಿ ರಂಗಾರೆಡ್ಡಿ ಜಿಲ್ಲಾ ಕೋರ್ಟ್ಗೆ ದೂರು ಸಲ್ಲಿಸಿದ್ದರು. ಆದರೆ ಕೋರ್ಟ್ನಿಂದ ಯಾವುದೇ ಉತ್ತರ ಬಂದಿರಲಿಲ್ಲ.
ಇದನ್ನೂ ಓದಿ:ಹುಟ್ಟುಹಬ್ಬದ ಸಂಭ್ರಮದಲ್ಲಿ ಇಬ್ರಾಹಿಂ ಅಲಿ ಖಾನ್; ವಿಶೇಷ ರೀತಿಯಲ್ಲಿ ಶುಭಾಶಯ ಕೋರಿದ ಕರೀನಾ
ಈ ಹಿನ್ನೆಲೆಯಲ್ಲಿ ಶುಕ್ರವಾರ ಮಧ್ಯಾಹ್ನ ತೆಲಂಗಾಣ ಹೈಕೋರ್ಟ್ನಲ್ಲಿ ಲಂಚ್ ಮೋಷನ್ ಪಿಟಿಷನ್ ಸಲ್ಲಿಸಿದ ಚಿನ್ನಿಕುಮಾರ್ ಚಿತ್ರ ಬಿಡುಗಡೆ ಮಾಡಲು ಅವಕಾಶ ನೀಡಬಾರದೆಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದರು. ವಿಚಾರಣೆ ವೇಳೆ ಜಿಲ್ಲಾ ಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದ ವಿಚಾರವನ್ನು ಮರೆಮಾಚಿದ್ದ ಅರ್ಜಿದಾರರ ವಿರುದ್ಧ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಜಿಲ್ಲಾ ಕೋರ್ಟ್ನಲ್ಲಿ ವಿಚಾರಣೆಯಲ್ಲಿದ್ದಾಗಲೇ ಹೈಕೋರ್ಟ್ನಲ್ಲಿ ತುರ್ತು ವಿಚಾರಣೆಗೆ ಅರ್ಜಿ ಸಲ್ಲಿಸಿದ ಕಾರಣದಿಂದಾಗಿ ಸಮಯ ವ್ಯರ್ಥಮಾಡಿದ ಕಾರಣದಿಂದಾಗಿ 10 ಲಕ್ಷ ರೂಪಾಯಿ ದಂಡ ವಿಧಿಸಿದೆ.