ಹೈದರಾಬಾದ್ :ಅತ್ಯಾಚಾರ ಸಂತ್ರಸ್ತೆಯಾದ ಅಪ್ರಾಪ್ತೆಗೆ ಗರ್ಭಪಾತ ಮಾಡಲು ಅವಕಾಶ ನೀಡಿ ತೆಲಂಗಾಣದ ಹೈಕೋರ್ಟ್ ಆದೇಶ ಹೊರಡಿಸಿದೆ. ಭ್ರೂಣದ ಅಂಗಾಂಶ,ಡಿಎನ್ಎ, ರಕ್ತದ ಮಾದರಿ ಸಂರಕ್ಷಿಸಿಡಬೇಕೆಂದು ಸೂಚಿಸಿದೆ.
ವೈದ್ಯರ ಶಿಫಾರಸು ಆಧರಿಸಿ ಗರ್ಭಪಾತಕ್ಕೆ ಅವಕಾಶ ನೀಡಲಾಗಿದೆ. ಗರ್ಭಪಾತಕ್ಕೆ ಅವಕಾಶ ನೀಡದಿದ್ದರೆ ಸಂತ್ರಸ್ತೆ ಮಾನಸಿಕ, ದೈಹಿಕ ಅನಾರೋಗ್ಯಕ್ಕೀಡಾಗುವ ಸಾಧ್ಯತೆ ಇರುತ್ತದೆ. ಈಗಾಗಲೇ 24 ವಾರ ಮೀರದ ಗರ್ಭವನ್ನು ತೆಗೆಸಲು ಕಾನೂನಿನಲ್ಲಿ ಅನುಮತಿ ನೀಡಲಾಗಿದೆ.
ಆದರೆ, ಈಗ ಅಪ್ರಾಪ್ತೆಯಲ್ಲಿರುವ ಗರ್ಭಕ್ಕೆ 25 ವಾರಗಳಾಗಿವೆ. ಅಪ್ರಾಪ್ತೆಯ ಆರೋಗ್ಯವನ್ನು ಗಮನದಲ್ಲಿರಿಸಿಕೊಂಡು ತೆಲಂಗಾಣ ಹೈಕೋರ್ಟ್ ಈ ರೀತಿಯ ಆದೇಶ ನೀಡಿದೆ. ಜೊತೆಗೆ ಗರ್ಭಧರಿಸುವ ಹಕ್ಕಿನ ಜೊತೆಗೆ ಬೇಡವಾದ ಗರ್ಭವನ್ನು ತೆಗೆಸಿ ಹಾಕುವ ಹಕ್ಕೂ ಸಂತ್ರಸ್ತರಿಗೆ ಇದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ನಡೆದಿದ್ದು ಏನು?
ಹೈದರಾಬಾದ್ನ 16 ವರ್ಷದ ಬಾಲಕಿ ಮೇಲೆ ಆಕೆಯ ಸಂಬಂಧಿಯಾದ ಆಂಜನೇಯಲು ಎಂಬಾತ ಅತ್ಯಾಚಾರ ಎಸಗಿ, ಯಾರೊಂದಿಗಾದರೂ ಈ ವಿಚಾರ ಹೇಳಿದರೆ ಕೊಲ್ಲುವುದಾಗಿ ಬೆದರಿಕೆ ಒಡ್ಡಿದ್ದ. ಸುಮಾರು 25 ವಾರಗಳ ನಂತರ ಆಕೆಗೆ ಅನಾರೋಗ್ಯ ಕಾಣಿಸಿತ್ತು.
ಪೋಷಕರು ಆಕೆಯ ಚಿಕಿತ್ಸೆಗೆ ಹೈದರಾಬಾದ್ನ ಕೋಠಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಆಕೆ ಗರ್ಭಿಣಿ ಆಗಿರುವುದನ್ನು ವೈದ್ಯರು ದೃಢಪಡಿಸಿದ್ದರು. ಈ ವೇಳೆ ಪೋಷಕರು ಬಾಲಕಿಯನ್ನು ಪ್ರಶ್ನಿಸಿದಾಗ ಆಕೆ ತನ್ನ ಮೇಲೆ ನಡೆದ ಅತ್ಯಾಚಾರದ ಬಗ್ಗೆ ಬಾಯ್ಬಿಟ್ಟಿದ್ದಾಳೆ.
ಪೊಲೀಸ್ ಠಾಣೆಯಲ್ಲಿ ದೂರು ದಾಖಲಿದ ಸಂತ್ರಸ್ತೆಯ ಪೋಷಕರು, ಗರ್ಭಪಾತಕ್ಕೆ ಅವಕಾಶ ನೀಡಲು ಹೈಕೋರ್ಟ್ಗೆ ಮೊರೆ ಹೋಗುತ್ತಾರೆ. ಈಗ ಹೈಕೋರ್ಟ್ನಲ್ಲಿ ವಿಚಾರಣೆ ನಡೆದಿದೆ. ಜಸ್ಟೀಸ್ ಬಿ ವಿಜಯ ಸೇನ್ ರೆಡ್ಡಿ ಅವರು ತಜ್ಞರ ಶಿಫಾರಸು ಆಧರಿಸಿ ಗರ್ಭಪಾತಕ್ಕೆ ಸೂಚಿಸಿದ್ದಾರೆ.
ಇದನ್ನೂ ಓದಿ:ಭಾರತಕ್ಕೆ ಬರುವ ವಿದೇಶಿಯರಿಗೆ ಅ.15 ರಿಂದ ಹೊಸ ಪ್ರವಾಸಿ ವೀಸಾ ನೀಡಲು ನಿರ್ಧಾರ