ಹೈದರಾಬಾದ್: ಬಿಆರ್‌ಎಸ್ ಶಾಸಕರನ್ನು ಖರೀದಿಸುವ ಯತ್ನ ನಡೆಸಲಾಗಿತ್ತು ಎಂಬ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರಿಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಜಾರಿಗೊಳಿಸಿದ್ದ ನೋಟಿಸ್‌ಗೆ ನೀಡಿದ್ದ ತಡೆಯಾಜ್ಞೆಯನ್ನು ತೆಲಂಗಾಣ ಹೈಕೋರ್ಟ್ ಡಿಸೆಂಬರ್ 30 ರವರೆಗೆ ವಿಸ್ತರಿಸಿದೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಮತ್ತು ಇತರ ಮೂವರಿಗೆ ಸಿಆರ್‌ಪಿಸಿಯ ಸೆಕ್ಷನ್ 41 ಎ ಅಡಿ ಎಸ್‌ಐಟಿ ನೀಡಿದ್ದ ನೋಟಿಸ್‌ಗೆ ನೀಡಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್ ಈ ಮೊದಲು ಡಿಸೆಂಬರ್ 22ರವರೆಗೆ ಮುಂದೂಡಿತ್ತು. ಡಿ.22 ರಂದು ಕೋರ್ಟ್ ತಡೆಯಾಜ್ಞೆಯನ್ನು ಡಿ.30ರವರೆಗೆ ವಿಸ್ತರಿಸಿ ಆದೇಶಿಸಿದೆ.
ನವೆಂಬರ್ 21 ರಂದು ವಿಚಾರಣೆಗೆ ಹಾಜರಾಗುವಂತೆ ಸಂತೋಷ್ ಮತ್ತು ಇತರರಿಗೆ ಎಸ್‌ಐಟಿ ನೋಟಿಸ್ ನೀಡಿತ್ತು. ಆದರೆ, ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಹಾಗಾಗಿ, ನ್ಯಾಯಾಲಯದ ನಿರ್ದೇಶನದ ಆಧಾರದ ಮೇಲೆ, ನವೆಂಬರ್ 26 ಅಥವಾ 28 ರಂದು ತನ್ನ ಮುಂದೆ ಹಾಜರಾಗುವಂತೆ ಎಸ್‌ಐಟಿ ಮತ್ತೆ ಸಂತೋಷ್‌ಗೆ ಸಮನ್ಸ್ ನೀಡಿತು.