ಹೈದರಾಬಾದ್(ತೆಲಂಗಾಣ) :ರಷ್ಯಾ-ಉಕ್ರೇನ್ ಬಿಕ್ಕಟ್ಟಿನಿಂದಾಗಿ ಅಲ್ಲಿ ವ್ಯಾಸಂಗ ಮಾಡ್ತಿದ್ದ ಸಾವಿರಾರು ವಿದ್ಯಾರ್ಥಿಗಳು ಇದೀಗ ಭಾರತಕ್ಕೆ ವಾಪಸ್ ಆಗಿದ್ದು, ಅವರ ಮುಂದಿನ ವಿದ್ಯಾಭ್ಯಾಸ ಡೋಲಾಯಮಾನವಾಗಿದೆ. ಇದರಲ್ಲಿ ತೆಲಂಗಾಣದ ಅನೇಕ ವಿದ್ಯಾರ್ಥಿಗಳು ಸಹ ಇದ್ದು, ಅವರಿಗೆ ಇದೀಗ ಸಿಎಂ ಕೆಸಿಆರ್ ನೇತೃತ್ವದ ರಾಜ್ಯ ಸರ್ಕಾರ ಗುಡ್ನ್ಯೂಸ್ ನೀಡಿದೆ.
ಉಕ್ರೇನ್ನ ವಿವಿಧ ನಗರಗಳಿಂದ ತೆಲಂಗಾಣಕ್ಕೆ ವಾಪಸ್ ಆಗಿರುವ 740 ವೈದ್ಯಕೀಯ ವಿದ್ಯಾರ್ಥಿಗಳಿಗೆ ತೆಲಂಗಾಣ ಸರ್ಕಾರ ಸಹಾಯಹಸ್ತ ನೀಡಲು ಮುಂದಾಗಿದ್ದು, ಅವರ ಅಧ್ಯಯನಕ್ಕಾಗಿ ಧನಸಹಾಯ ನೀಡುವುದಾಗಿ ಘೋಷಣೆ ಮಾಡಿದೆ.
ವಿಧಾನಸಭೆಯಲ್ಲಿ ಮಾತನಾಡಿರುವ ಮುಖ್ಯಮಂತ್ರಿ ಕೆಸಿಆರ್, ರಾಜ್ಯದ 740 ವಿದ್ಯಾರ್ಥಿಗಳು ಉಕ್ರೇನ್ನಲ್ಲಿ ವ್ಯಾಸಂಗ ಮಾಡ್ತಿದ್ದರು. ಇದೀಗ ಅವರೆಲ್ಲರೂ ವಾಪಸ್ ಆಗಿದ್ದು, ಅವರಿಗೆ ಧನಸಹಾಯ ನೀಡುವುದಾಗಿ ತಿಳಿಸಿದ್ದಾರೆ. ಉಕ್ರೇನ್ನಿಂದ ವಾಪಸ್ ಆಗಿರುವ ವಿದ್ಯಾರ್ಥಿಗಳನ್ನ ನಾವು ಬೆಂಬಲಿಸುತ್ತೇವೆಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದಿದ್ದಾರೆ.
ಇದನ್ನೂ ಓದಿರಿ:ಹಿಜಾಬ್ ಬಗ್ಗೆ ಹೈಕೋರ್ಟ್ ನೀಡಿದ ತೀರ್ಪು ಸ್ವಾಗತಾರ್ಹ ಎಂದ ರಾಜನಾಥ್ ಸಿಂಗ್
ಉಕ್ರೇನ್ನ ಖಾರ್ಕಿವ್, ಕೀವ್ ಸೇರಿದಂತೆ ಅನೇಕ ನಗರಗಳಲ್ಲಿ ಭಾರತೀಯ ವಿದ್ಯಾರ್ಥಿಗಳು ವ್ಯಾಸಂಗ ಮಾಡ್ತಿದ್ದರು. ಕಳೆದ ಫೆಬ್ರವರಿ ತಿಂಗಳಲ್ಲಿ ರಷ್ಯಾ-ಉಕ್ರೇನ್ ನಡುವಿನ ಸಂಘರ್ಷ ಉಲ್ಭಣಗೊಳ್ಳುತ್ತಿದ್ದಂತೆ 20 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳನ್ನ ಸುರಕ್ಷಿತವಾಗಿ ಭಾರತಕ್ಕೆ ವಾಪಸ್ ಕರೆತಲಾಗಿದೆ. ಆದರೆ, ಕರ್ನಾಟಕದ ಫೈನಲ್ ವರ್ಷದ ವಿದ್ಯಾರ್ಥಿ ನವೀನ್ ಸಾವನ್ನಪ್ಪಿದ್ದಾನೆ.