ಹೈದರಾಬಾದ್(ತೆಲಂಗಾಣ):ತೆಲಂಗಾಣದ ವಿವಿಧ ಪ್ರದೇಶಗಳಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಅತ್ಯಾಚಾರ ಪ್ರಕರಣ ನಡೆದಿರುವ ಬಗ್ಗೆ ವರದಿಯಾಗಿವೆ. ಇದರ ಬೆನ್ನಲ್ಲೇ ತೆಲಂಗಾಣ ರಾಜ್ಯಪಾಲೆ ಡಾ. ತಮಿಳಿಸೈ ಸೌಂದರರಾಜನ್ 'ಮಹಿಳಾ ದರ್ಬಾರ್' ನಡೆಸಲು ಮುಂದಾಗಿದ್ದಾರೆ. ಇದು ಕೆಸಿಆರ್ ಸರ್ಕಾರಕ್ಕೆ ಮತ್ತಷ್ಟು ಇರಿಸು - ಮುರಿಸು ಉಂಟು ಮಾಡುವ ಸಾಧ್ಯತೆ ದಟ್ಟವಾಗಿದೆ. ಮಹಿಳೆಯರ ಧ್ವನಿ ಕೇಳಲು ಈ ವಿನೂತನ ಕಾರ್ಯಕ್ಕೆ ಮಹಿಳಾ ಗವರ್ನರ್ ಮುಂದಾಗಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಜುಬಿಲಿ ಹಿಲ್ಸ್ನಲ್ಲಿ 17 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ ನಡೆದಿದ್ದು, ಇದಕ್ಕೆ ಸಂಬಂಧಿಸಿದಂತೆ ರಾಜ್ಯದ ಮುಖ್ಯಕಾರ್ಯದರ್ಶಿ ಹಾಗೂ ಪೊಲೀಸ್ ಮಹಾನಿರ್ದೇಶಕರಿಂದ ರಾಜ್ಯಪಾಲೆ ವಿಸ್ತೃತ ವರದಿ ಕೇಳಿದ್ದಾರೆ. ಇದೀಗ ಜೂನ್ 10ರಂದು(ನಾಳೆ) ರಾಜಭವನದಲ್ಲಿ ಮಹಿಳಾ ದರ್ಬಾರ್ ಕಾರ್ಯಕ್ರಮ ಆಯೋಜಿಸಿದ್ದಾರೆ.
ಇದನ್ನೂ ಓದಿ:ಮಗನ ಶವ ನೀಡಲು ₹50 ಸಾವಿರಕ್ಕೆ ಬೇಡಿಕೆ ಇಟ್ಟ ಆಸ್ಪತ್ರೆ.. ಮನೆ ಮನೆಗೆ ತೆರಳಿ ಭಿಕ್ಷೆ ಬೇಡುತ್ತಿರುವ ದಂಪತಿ!
ಪ್ರಜಾ ದರ್ಬಾರ್ ನಿಮಿತ್ತ ಮಹಿಳೆಯರ ಧ್ವನಿಯಾಗಲು ಮಹಿಳಾ ದರ್ಬಾರ್ ನಡೆಸಲಿದ್ದು, ಇಲ್ಲಿ ಮಹಿಳೆಯರ ನೋವು ಹೇಳಿಕೊಳ್ಳಲು ಅವಕಾಶ ನೀಡಲಾಗುವುದು ಎಂದು ತಿಳಿದು ಬಂದಿದೆ. ನಾಳೆ ಮಧ್ಯಾಹ್ನ 1 ಗಂಟೆಗೆ ಈ ಕಾರ್ಯಕ್ರಮ ಆಯೋಜನೆಗೊಂಡಿದೆ. ರಾಜ್ಯಪಾಲರನ್ನ ಭೇಟಿಯಾಗಲು ಬಯಸುವ ಮಹಿಳೆಯರು 040-23310521ಗೆ ಕರೆ ಮಾಡಬಹುದಾಗಿದ್ದು, ಅಥವಾ rajbhavan-hyd@gov.in ಗೆ ಇಮೇಲ್ ಮಾಡಿ, ಅಪಾಯಿಂಟ್ಮೆಂಟ್ ಪಡೆದುಕೊಳ್ಳಬಹುದಾಗಿದೆ ಎಂದು ರಾಜಭವನ ತಿಳಿಸಿದೆ.
ಮೇ. 28ರಂದು ಜುಬಿಲಿ ಹಿಲ್ಸ್ನಲ್ಲಿ ನಡೆದ ಅಪ್ರಾಪ್ತೆ ಅತ್ಯಾಚಾರದ ಬೆನ್ನಲ್ಲೇ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿವೆ. ಇದರ ಬೆನ್ನಲ್ಲೇ ರಾಜ್ಯಪಾಲರು ಮಹಿಳಾ ದರ್ಬಾರ್ ನಡೆಸುತ್ತಿದ್ದಾರೆ. ಇದು ರಾಜ್ಯ ಸರ್ಕಾರ ಹಾಗೂ ಗವರ್ನರ್ ನಡುವಿನ ಉದ್ವಿಗ್ನತೆಗೆ ಮತ್ತಷ್ಟು ಕಾರಣವಾಗುವ ಸಾಧ್ಯತೆ ಇದೆ.