ಹೈದರಾಬಾದ್:ಇತ್ತೀಚೆಗಷ್ಟೇ ನಾಲ್ಕು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿಬಂದ ಶಾಲೆಯ ಮಾನ್ಯತೆ ರದ್ದುಪಡಿಸಿ ಶಿಕ್ಷಣ ಸಚಿವೆ ಪಿ ಸಬಿತಾ ಇಂದ್ರಾ ರೆಡ್ಡಿ ಆದೇಶ ಹೊರಡಿಸಿದ್ದಾರೆ. ನಗರದ ಪೊಲೀಸರು ಈಗಾಗಲೇ ತನಿಖೆಗೆ ಸಹಕರಿಸದ ಹಿನ್ನೆಲೆಯಲ್ಲಿ ಪೊಲೀಸರು ಶಾಲೆಯ ಪ್ರಾಂಶುಪಾಲರನ್ನು ಮತ್ತು ಆಕೆಯ ಚಾಲಕನನ್ನು ಪೋಕ್ಸೊ ಕಾಯ್ದೆಯಡಿ ಬಂಧಿಸಿದ್ದಾರೆ.
ಪ್ರಸ್ತುತ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ವಿದ್ಯಾರ್ಥಿಗಳನ್ನು ಬೇರೆ ಶಾಲೆಗಳಿಗೆ ದಾಖಲಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ವಿದ್ಯಾರ್ಥಿಗಳ ಪೋಷಕರ ಅನುಮಾನಗಳನ್ನು ನಿವಾರಿಸುವುದು ಡಿಇಒ ಅವರ ಜವಾಬ್ದಾರಿ ಎಂದು ಸಚಿವೆ ಸಬಿತಾ ಇಂದ್ರಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಲು ಸಚಿವರು ಸೂಚಿಸಿದ್ದಾರೆ. ಸಂಸ್ಥೆಗಳಲ್ಲಿ ಭದ್ರತಾ ಕ್ರಮಗಳನ್ನು ಅಧ್ಯಯನ ಮಾಡಲು ಮತ್ತು ಸರ್ಕಾರಕ್ಕೆ ಸಲಹೆಗಳನ್ನು ನೀಡಲು ಶಿಕ್ಷಣ ಇಲಾಖೆ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯು ಭದ್ರತಾ ಅಂಶಗಳ ಆಳವಾದ ಅಧ್ಯಯನ ನಡೆಸಿ ಒಂದು ವಾರದೊಳಗೆ ತನ್ನ ವರದಿ ಸಲ್ಲಿಸಲಿದೆ. ವರದಿ ಆಧರಿಸಿ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಭದ್ರತೆ ಹೆಚ್ಚಿಸಲು ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಚಿವೆ ತಿಳಿಸಿದ್ದಾರೆ.
ಘಟನೆಯ ಹಿನ್ನೆಲೆ: ಹೈದರಾಬಾದ್ ನಗರದ ಬಂಜಾರ ಹಿಲ್ಸ್‌ನ ಶಾಲೆಯಲ್ಲಿ ನಾಲ್ಕು ವರ್ಷದ ಬಾಲಕಿ ಮೇಲೆ ಪ್ರಾಂಶುಪಾಲರ ಚಾಲಕ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಬೆಳಕಿಗೆ ಬಂದಿತ್ತು. 34 ವರ್ಷದ ಆರೋಪಿಯನ್ನು ಬಂಜಾರ ಹಿಲ್ಸ್ ಪೊಲೀಸರು ಔಪಚಾರಿಕವಾಗಿ ಬಂಧಿಸಿ ಸಿಟಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಶಾಲೆಯ ವಿದ್ಯಾರ್ಥಿಯೊಬ್ಬರ ಮೇಲೆ ಪದೇ ಪದೇ ಲೈಂಗಿಕ ದೌರ್ಜನ್ಯ ಎಸಗುತ್ತಿರುವ ಬಗ್ಗೆ ನಿರ್ಲಕ್ಷ್ಯ ವಹಿಸಿರುವ ಆರೋಪದ ಮೇಲೆ ಪ್ರಾಂಶುಪಾಲೆಯನ್ನೂ ಸಹ ಬಂಧಿಸಲಾಗಿತ್ತು.