ಹೈದರಾಬಾದ್:ಹಾಡುವುದೆಂದರೆ ಸುಮ್ಮನಲ್ಲ. ಅದರಲ್ಲೂ 17 ಭಾಷೆಗಳಲ್ಲಿ ಹಾಡೋದೆಂದರೆ ನಂಬೋಕೆ ಆಗಲ್ಲ. ಇಲ್ಲೊಬ್ಬ 17 ವರ್ಷದ ಹುಡುಗಿ 17 ವಿವಿಧ ಭಾಷೆಗಳಲ್ಲಿ ಹಾಡುತ್ತಾಳಂತೆ. ಈ ಬಹುಮುಖ ಪ್ರತಿಭೆ ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ವಂಡರ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾಳೆ.
ಈ ಬಾಲಕಿಯ ಹೆಸರು ಜಾಹ್ನವಿ. ತೆಲಂಗಾಣದ ಮಂಚೇರಿಯಲ್ ಜಿಲ್ಲೆಯ ಸುಜಾತಾ ಮತ್ತು ಮುರಳಿ ದಂಪತಿಯ ಪುತ್ರಿ. ಜಾಹ್ನವಿ ತೆಲುಗು, ಇಂಗ್ಲಿಷ್, ಗುಜರಾತಿ, ಪಂಜಾಬಿ, ಮರಾಠಿ, ತಮಿಳು, ನೇಪಾಳಿ, ಕನ್ನಡ, ಒರಿಯಾ, ಉರ್ದು, ಹಿಂದಿ, ಬೆಂಗಾಲಿ, ಲಂಬಾಣಿ, ಮಲಯಾಳಂ ಮತ್ತು ದಕ್ಷಿಣ ಆಫ್ರಿಕಾದ ಭಾಷೆ ಸೇರಿದಂತೆ 17 ಭಾಷೆಗಳಲ್ಲಿ ಹಾಡಿದ್ದಾರೆ.
ಮಂಚೇರಿಯಲ್ ಜಿಲ್ಲೆಯ ಖಾಸಗಿ ಜೂನಿಯರ್ ಕಾಲೇಜಿನಲ್ಲಿ ಪಿಯು ಪ್ರಥಮ ವರ್ಷದ ವಿದ್ಯಾರ್ಥಿನಿಯಾಗಿರುವ ಜಾಹ್ನವಿ ಮಕ್ಕಳ ದಿನಾಚರಣೆಯಂದು ಹೈದರಾಬಾದ್‌ನ ರವೀಂದ್ರ ಭಾರತಿಯಲ್ಲಿ ನಡೆದ ಬಾಲೋತ್ಸವದಲ್ಲಿ ನಡೆದ ಹಾಡಿನ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಪಡೆದಿದ್ದಾರೆ. ಇವರಿಗೆ ಹರಿಯಾಣದ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರು ಪ್ರಶಸ್ತಿ ವಿತರಿಸಿದ್ದಾರೆ.