ಹೈದರಾಬಾದ್, ತೆಲಂಗಾಣ:ಮಾಜಿ ಸಿಎಂ ಕೆಸಿಆರ್ ಅವರನ್ನು ಗುರುವಾರ ಮಧ್ಯರಾತ್ರಿ ಯಶೋದಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೆಯ ವಾಶ್ರೂಂನಲ್ಲಿ ಕೆಸಿಆರ್ ಜಾರಿಬಿದ್ದು ಗಾಯಗೊಂಡಿದ್ದರು. ಕೂಡಲೇ ಅವರು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಕೆಸಿಆರ್ ಅವರ ಸೊಂಟದ ಮೂಳೆ ಮುರಿದಿರುವುದನ್ನು ವೈದ್ಯರು ಪತ್ತೆ ಮಾಡಿದ್ದಾರೆ. ಕೆಸಿಆರ್ ಸದ್ಯ ಸೋಮಾಜಿಗುಡ ಯಶೋದಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗಬಹುದು ಎಂದು ವೈದ್ಯರು ಹೇಳಿದ್ದಾರೆ. ವೈದ್ಯಕೀಯ ಪರೀಕ್ಷೆಗಳು ಮುಗಿದ ನಂತರ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಕೆಸಿಆರ್ ಅವರ ಆರೋಗ್ಯ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವಂತೆ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ರಾಜ್ಯ ಆರೋಗ್ಯ ಇಲಾಖೆ ಕಾರ್ಯದರ್ಶಿ ರಿಜ್ವಿಗೆ ಸೂಚಿಸಿದ್ದಾರೆ. ಸಿಎಂ ಆದೇಶದಂತೆ ಯಶೋದಾ ಆಸ್ಪತ್ರೆಗೆ ತೆರಳಿದ ರಿಜ್ವಿ ಅವರು ವೈದ್ಯರೊಂದಿಗೆ ಮಾತನಾಡಿ ಕೆಸಿಆರ್ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದರು. ಬಳಿಕ ಕೆಸಿಆರ್ ಅವರ ಆರೋಗ್ಯ ಸ್ಥಿತಿಯನ್ನು ರಿಜ್ವಿ ಅವರು ರೇವಂತ್ ಅವರಿಗೆ ವಿವರಿಸಿದ್ದಾರೆ. ಗುರುವಾರ ರಾತ್ರಿ ಕೆಸಿಆರ್ ಅವರನ್ನು ಆಂಬ್ಯುಲೆನ್ಸ್‌ಗೆ ಮೂಲಕ ಆಸ್ಪತ್ರೆಗೆ ಕರೆದೊಯ್ಯುವಾಗ ಅಧಿಕಾರಿಗಳು ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ದರು.
ತುಂಬಾ ನೋವಾಯಿತು ಎಂದ ಪ್ರಧಾನಿ: ಕೆಸಿಆರ್ ಆರೋಗ್ಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದಾರೆ. 'ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆಸಿಆರ್ ಗಾಯಗೊಂಡಿರುವ ವಿಚಾರ ತಿಳಿದು ನನಗೆ ತುಂಬಾ ನೋವಾಗಿದೆ. ಅವರು ಶೀಘ್ರ ಗುಣಮುಖರಾಗಲಿ ಮತ್ತು ಉತ್ತಮ ಆರೋಗ್ಯದೊಂದಿಗೆ ತಿರುಗಿ ಬರಲಿ ಎಂದು ಪ್ರಾರ್ಥಿಸುತ್ತೇನೆ' ಅಂತಾ ಮೋದಿ ಟ್ವೀಟ್ ಮಾಡಿದ್ದಾರೆ.
ಟ್ವೀಟ್ ಮಾಡಿ ಮಾಹಿತಿ ನೀಡಿದ ಕೆ ಕವಿತಾ:ತೆಲಂಗಾಣ ಬಿಆರ್‌ಎಸ್ ಎಂಎಲ್‌ಸಿ ಹಾಗೂ ಅವರ ಪುತ್ರಿ ಕೆ.ಕವಿತಾ ಟ್ವೀಟ್ ಮಾಡಿದ್ದಾರೆ "ಬಿಆರ್‌ಎಸ್ ಮುಖ್ಯಸ್ಥ ಕೆಸಿಆರ್ ಅವರಿಗೆ ಸಣ್ಣ ಗಾಯವಾಗಿದ್ದು, ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ತಜ್ಞರ ಆರೈಕೆಯಲ್ಲಿದ್ದಾರೆ. ಜನರ ಬೆಂಬಲ ಮತ್ತು ಶುಭಾಶಯಗಳ ಮಹಾಪೂರದಿಂದ, ನಮ್ಮ ತಂದೆ ಶೀಘ್ರದಲ್ಲೇ ಸಂಪೂರ್ಣವಾಗಿ ಗುಣಮುಖರಾಗುತ್ತಾರೆ" ಎಂದು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.