ಹೈದರಾಬಾದ್ (ತೆಲಂಗಾಣ): ಜೂನ್ 2, 2014 ರಂದು ಹೊಸದಾಗಿ ಅಸ್ತಿತ್ವಕ್ಕೆ ಬಂದ ತೆಲಂಗಾಣ ರಾಜ್ಯ ಇದೀಗ 9 ವರ್ಷಗಳನ್ನು ಪೂರೈಸಿದೆ. ರಾಜ್ಯ ಹತ್ತನೇ ವರ್ಷಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ದಶಮಾನೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದೆ. ಮೂರು ವಾರಗಳ ಕಾಲ ವಿಶೇಷ ಆಚರಣೆಗೆ ರಾಜ್ಯ ಸರ್ಕಾರ ನಿರ್ಧರಿಸಿದ್ದು, ಅದಕ್ಕೆ ತಕ್ಕಂತೆ ವ್ಯವಸ್ಥೆಗಳನ್ನು ಮಾಡಿದೆ. ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ ರಾವ್ ಅವರು ಇಂದು ಸೆಕ್ರೆಟರಿಯೇಟ್‌ನಲ್ಲಿ ಈ ಆಚರಣೆಗಳನ್ನು ಉದ್ಘಾಟಿಸಲಿದ್ದಾರೆ.
ಕೆಸಿಆರ್ ಇಂದು ಬೆಳಗ್ಗೆ ಗನ್‌ಪಾರ್ಕ್‌ನಲ್ಲಿರುವ ಹುತಾತ್ಮರ ಸ್ಮಾರಕಕ್ಕೆ ನಮನ ಸಲ್ಲಿಸಿದ್ದು, ನಂತರ ಸೆಕ್ರೆಟರಿಯೇಟ್‌ನಲ್ಲಿ ಆಚರಣೆಗೆ ಚಾಲನೆ ನೀಡುವರು. ಈ ವೇಳೆ ರಾಷ್ಟ್ರಧ್ವಜ ಹಾರಿಸಿ ಪೊಲೀಸ್ ಗೌರವ ವಂದನೆ ಸ್ವೀಕರಿಸಲಿದ್ದಾರೆ. ಆ ಬಳಿಕ ರಾಜ್ಯವನ್ನು ಉದ್ದೇಶಿಸಿ ದಶಮಾನೋತ್ಸವ ಸಂದೇಶ ನೀಡಲಿದ್ದಾರೆ. ಸೆಕ್ರೆಟರಿಯೇಟ್ ಉದ್ಘಾಟನೆಯ ನಂತರ ಮೊದಲ ಕಾರ್ಯಕ್ರಮ ಆಯೋಜಿಸಲು ವ್ಯವಸ್ಥೆ ಮಾಡಲಾಗಿದೆ. ಒಟ್ಟು 15,000 ಜನರು ಕುಳಿತುಕೊಳ್ಳಲು ಕುರ್ಚಿಗಳ ವ್ಯವಸ್ಥೆಯಾಗಿದೆ.
ತೆಲಂಗಾಣ ರಾಜ್ಯ ಸಂಸ್ಥಾಪನಾ ಸಮಾರಂಭ 2023:ಸೆಕ್ರೆಟರಿಯೇಟ್ ಮತ್ತು GHMC ಅಡಿಯಲ್ಲಿನ ಇಲಾಖೆಗಳ ಮುಖ್ಯಸ್ಥರ ಕಚೇರಿಗಳ ನೌಕರರು ಆಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅವರಿಗಾಗಿಯೇ 300 ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಮಳೆ, ಬಿಸಿಲಿನಿಂದ ಯಾವುದೇ ತೊಂದರೆಯಾಗದಂತೆ ಟೆಂಟ್ ಹಾಕಲಾಗಿದೆ. ಉದ್ಘಾಟನಾ ಸಮಾರಂಭಕ್ಕೆ 1.80 ಕೋಟಿ ರೂ ಮಂಜೂರಾಗಿದೆ. ಎಲ್ಲ ಇಲಾಖಾ ಮುಖ್ಯಸ್ಥರು ಬೆಳಗ್ಗೆ ಏಳೂವರೆ ಗಂಟೆಗೆ ತಮ್ಮ ಕಚೇರಿಗಳಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿ ಎಂಟು ಗಂಟೆಯೊಳಗೆ ಸೆಕ್ರೆಟರಿಯೇಟ್ ತಲುಪುವಂತೆ ಆದೇಶ ನೀಡಲಾಗಿದೆ.
ಸೆಕ್ರೆಟರಿಯೇಟ್‌ನ ಮುಖ್ಯ ದ್ವಾರದ ಮುಂಭಾಗದಲ್ಲಿ ಸಮಾರಂಭದ ವ್ಯವಸ್ಥೆ ಮಾಡಲಾಗಿದ್ದು, ಕೆಸಿಆರ್ ಪಶ್ಚಿಮ ದ್ವಾರದಿಂದ ಸೆಕ್ರೆಟರಿಯೇಟ್‌ಗೆ ಆಗಮಿಸಲಿದ್ದಾರೆ. ಜಿಲ್ಲಾ ಕೇಂದ್ರಗಳಲ್ಲಿ ಸಚಿವರು ಹಾಗೂ ಗಣ್ಯರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಸಂಭ್ರಮಾಚರಣೆಗೆ ಚಾಲನೆ ನೀಡಲಿದ್ದಾರೆ. ಸಾರ್ವಜನಿಕ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ತಮ್ಮ ತಮ್ಮ ಕಚೇರಿಗಳಲ್ಲಿ ಸಂಭ್ರಮಾಚರಣೆಯಲ್ಲಿ ಭಾಗವಹಿಸುತ್ತಾರೆ. ರಾಜ್ಯದ ಎಲ್ಲ ಸರ್ಕಾರಿ ಸಂಸ್ಥೆಗಳು ಮತ್ತು ಕಚೇರಿಗಳಲ್ಲಿ ಉದ್ಘಾಟನಾ ಸಮಾರಂಭದ ಸಂದರ್ಭದಲ್ಲಿ ರಾಷ್ಟ್ರಧ್ವಜಾರೋಹಣ ಮಾಡಲು ಈಗಾಗಲೇ ಆದೇಶ ಹೊರಡಿಸಲಾಗಿದೆ.