ಹೈದರಾಬಾದ್ (ತೆಲಂಗಾಣ):ಫಲಕ್ನುಮಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಕಾಣಿಸಿಕೊಂಡು ನಾಲ್ಕು ಬೋಗಿಗಳು ಸುಟ್ಟು ಕರಕಲಾದ ಘಟನೆ ಇಂದು ನಡೆದಿದೆ. ಯಾದಾದ್ರಿ ಭುವನಗಿರಿ ಜಿಲ್ಲೆಯ ಪಗಿಡಿಪಲ್ಲಿ ಮತ್ತು ಬೊಮ್ಮಾಯಿಪಲ್ಲಿ ನಡುವೆ ಅವಘಡ ಸಂಭವಿಸಿತು. ವಿಷಯ ತಿಳಿದ ತಕ್ಷಣ ರೈಲ್ವೇ ಸಿಬ್ಬಂದಿ ರೈಲು ನಿಲ್ಲಿಸಿ ಎರಡೂ ಬೋಗಿಗಳಿಂದ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ. ಹೀಗಾಗಿ ಪ್ರಾಣಾಪಾಯ ತಪ್ಪಿದೆ. ಅಪಾರ ಪ್ರಮಾಣದ ಬೆಂಕಿ 5 ಮತ್ತು 6ನೇ ಬೋಗಿಗೆ ಹರಡಿಕೊಂಡಿತು. ಕೂಡಲೇ ಸ್ಥಳಕ್ಕಾಗಮಿಸಿದ ಸಿಬ್ಬಂದಿ ಬೋಗಿಗಳ ನಡುವಿನ ಸಂಪರ್ಕವನ್ನು ಬೇರ್ಪಡಿಸಿ ರೈಲು ಮುಂದಕ್ಕೆ ಸರಿಸಿದ್ದಾರೆ.
ಅಗ್ನಿಶಾಮಕ ವಾಹನಗಳು ಸ್ಥಳ ತಲುಪಲು ಸರಿಯಾದ ರಸ್ತೆ ಮಾರ್ಗವಿಲ್ಲದ ಬೆಂಕಿ ನಂದಿಸುವ ಪ್ರಕ್ರಿಯೆ ತಡವಾಯಿತು. ಸ್ಥಳೀಯ ಪೊಲೀಸರು ಮತ್ತು ಆರ್‌ಡಿಒ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ತಲುಪಿದ್ದರು. ಮತ್ತೊಂದೆಡೆ, ರೈಲ್ವೆ ಜಿಎಂ ಅರುಣ್ ಕುಮಾರ್ ಜೈನ್ ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ. ಆರ್‌ಡಿಒ ಭೂಪಾಲ್ ರೆಡ್ಡಿ ಅವರು ಘಟನಾ ಸ್ಥಳದಿಂದ ರೈಲ್ವೆ ಅಧಿಕಾರಿಗಳು ಮತ್ತು ಅಗ್ನಿಶಾಮಕ ಅಧಿಕಾರಿಗಳೊಂದಿಗೆ ಸಂವಹನ ನಡೆಸುತ್ತಿದ್ದಾರೆ. ಬೋಗಿಗಳ ಕೊಂಡಿ ತಪ್ಪಿರುವುದರಿಂದ ಇತರ ಬೋಗಿಗಳಿಗೂ ಬೆಂಕಿ ತಗುಲುವ ಸಾಧ್ಯತೆ ಇಲ್ಲ ಎಂದು ಅವರು ಹೇಳಿದರು.
ಮತ್ತೊಂದೆಡೆ, ಬದುಕುಳಿದಿರುವ ಪ್ರಯಾಣಿಕರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಅವರ ಸಾಮಾಗ್ರಿಗಳು ಸುಟ್ಟುಹೋಗಿವೆ ಎಂದು ತಿಳಿದುಬಂದಿದೆ. ಉದ್ಯೋಗನಿಮಿತ್ತ ಹೈದರಾಬಾದ್‌ಗೆ ಹೋಗುತ್ತಿದ್ದು, ಎಲ್ಲ ಸರ್ಟಿಫಿಕೇಟ್‌ಗಳನ್ನು ರೈಲಿನಲ್ಲಿ ಬಿಟ್ಟು ಹೋಗಿರುವುದಾಗಿ ಯುವತಿಯೊಬ್ಬರು ಅಳಲು ತೋಡಿಕೊಂಡರು. ಅಪಘಾತದ ಮಾಹಿತಿ ತಿಳಿದ ರೈಲ್ವೇ ಅಧಿಕಾರಿಗಳು ಅಲ್ಲಿಂದ ಹೈದರಾಬಾದ್‌ಗೆ ಪ್ರಯಾಣಿಕರನ್ನು ಸಾಗಿಸಲು 6 ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಿದ್ದಾರೆ. ಉಳಿದ ಪ್ರಯಾಣಿಕರನ್ನು ಕರೆತರಲು ಸಿಕಂದರಾಬಾದ್‌ನಿಂದ ಲೋಕಮಾನ್ಯ ತಿಲಕ್ ರೈಲು ಸ್ಥಳಕ್ಕೆ ತೆರಳಿದೆ.