ಹೈದರಾಬಾದ್ (ತೆಲಂಗಾಣ): ''ಬಾಲ್ಯದಲ್ಲಿ ನಕ್ಸಲೈಟ್ ಆಗುವೆನೆಂದು ಎಂದಿಗೂ ಯೋಚಿಸಿರಲಿಲ್ಲ. ನಕ್ಸಲೈಟ್ ಆಗಿದ್ದಾಗ ವಕೀಲೆಯಾಗುವೆನೆಂದು ಅಂದುಕೊಂಡಿರಲಿಲ್ಲ. ವಕೀಲೆಯಾದಾಗ ಎಂಎಲ್ಎ ಆಗುವ ಕನಸು ಕಟ್ಟಿಕೊಂಡಿರಲಿಲ್ಲ''. ಇದು ತೆಲಂಗಾಣದ ರಾಜಕಾರಣಿ, ಕಾಂಗ್ರೆಸ್ ನಾಯಕಿ ಧನಸಾರಿ ಅನಸೂಯಾ ಅಲಿಯಾಸ್ ಸೀತಕ್ಕನವರ ವರ್ಷ ಹಿಂದಿನ ಮಾತು. ಇಂದು ಇವರು ರಾಜಕೀಯದಲ್ಲಿ ಹಂತಹಂತವಾಗಿ ಬಡ್ತಿ ಪಡೆದು ಮುಖ್ಯಮಂತ್ರಿ ರೇವಂತ್ ರೆಡ್ಡಿ ನೇತೃತ್ವದ ಸರ್ಕಾರದಲ್ಲಿ ಸಚಿವೆಯಾಗಿ ಪದಗ್ರಹಣ ಮಾಡಿದ್ದಾರೆ.
ಧನಸಾರಿ ಅನಸೂಯಾ ಅನೇಕ ವರ್ಷಗಳ ಕಾಲ ನಕ್ಸಲ್ ಆಗಿದ್ದು ಅಜ್ಞಾತವಾಸ ಮಾಡಿದವರು. ಬಂಡಾಯದ ಹೋರಾಟದಲ್ಲಿ 'ಸೀತಕ್ಕ' ಎಂದೇ ಇವರ ಹೆಸರು. ರಾಜಕೀಯಕ್ಕೆ ಸೇರುವ ಮುನ್ನ ಹದಿನೈದು ವರ್ಷಗಳಿಗೂ ಹೆಚ್ಚು ಕಾಲ ಅರಣ್ಯದಲ್ಲಿಕೊಂಡೇ ಜನರಿಗಾಗಿ ದುಡಿದವರು. ನಂತರದಲ್ಲಿ ಕಾಡಿನ ಜೀವನಕ್ಕೆ ವಿದಾಯ ಹೇಳಿ ಮುಖ್ಯವಾಹಿನಿ ಬಂದಿರುವ ಇವರೀಗ ರಾಜ್ಯಾದ್ಯಂತ ವಿಶೇಷ ಚರಿಶ್ಮಾ ಹೊಂದಿದ್ದಾರೆ. ರಾಜ್ಯಶಾಸ್ತ್ರದಲ್ಲಿ ಪಿಎಚ್‌ಡಿ ಪಡೆದು ದೇಶದ ಗಮನವನ್ನೂ ಸೆಳೆದವರು ಈಕೆ. ಜೀವನದ ಹೋರಾಟದಲ್ಲಿ ರಾಜಕೀಯದಲ್ಲೂ ಅನೇಕ ಏರಿಳಿತಗಳನ್ನೂ ಕಂಡಿದ್ದಾರೆ.
ಮುಖ್ಯವಾಹಿನಿಗೆ ಬಂದಿದ್ದು ಹೇಗೆ?:ಸಂಯುಕ್ತ ವಾರಂಗಲ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಜನಶಕ್ತಿ ಸಶಸ್ತ್ರ ಹೋರಾಟದಲ್ಲಿ ಸೀತಕ್ಕ ಸಕ್ರಿಯರಾಗಿದ್ದರು. ಮಹಿಳಾ ನಕ್ಸಲ್ ಆಗಿ ಹಾಗೂ ತಂಡದ ನಾಯಕಿಯಾಗಿ ಪ್ರಮುಖ ಪಾತ್ರ ವಹಿಸಿದ್ದರು. ಸಂಘಟನೆಯ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ ಸೀತಕ್ಕ ಸುಮಾರು ಎರಡು ದಶಕಗಳ ಕಾಲ ಅದರ ಒಡನಾಡಿಯಾಗಿ ಕಾಲ ಕಳೆದರು. ಇದೇ ಸಮಯದಲ್ಲಿ ಸೀತಕ್ಕ ಕಮಾಂಡರ್ ನಕ್ಸಲ್ ನಾಯಕನನ್ನೇ ವಿವಾಹವಾಗಿದ್ದರು. ಈ ನಡುವೆ ಖ್ಯಾತ ನಟ, ಮಾಜಿ ಸಿಎಂ ನಂದಮೂರಿ ತಾರಕ ರಾಮರಾವ್ (ಎನ್ಟಿಆರ್) ಅವರು ನಕ್ಸಲರಿಗೆ ಮುಖ್ಯವಾಹಿನಿಗೆ ಬಂದು ನವಜೀವನ ನಡೆಸುವಂತೆ ಕರೆ ನೀಡುತ್ತಾರೆ. ಈ ಕರೆಗೆ ಓಗೊಟ್ಟ ಸೀತಕ್ಕ ಬಂಡಾಯದ ಹೋರಾಟ ಕೈಬಿಡುತ್ತಾರೆ. ಪೊಲೀಸರಿಗೆ ಶರಣಾಗುತ್ತಾರೆ. ಸೀತಕ್ಕ ದಂಪತಿಗೀಗ ಒಬ್ಬ ಪುತ್ರನಿದ್ದಾನೆ.
ಸೀತಕ್ಕನವರ ರಾಜಕೀಯ ಪಯಣ:ಸೀತಕ್ಕ ತೆಲುಗು ದೇಶಂ ಪಕ್ಷದ (ಟಿಡಿಪಿ) ಮೂಲಕ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದರು. 2001ರಲ್ಲಿ ಹೈದರಾಬಾದ್‌ನಲ್ಲಿ ಎಲ್‌ಎಲ್‌ಬಿ ಪದವಿಗೆ ಸೇರಿದರು. ಈ ಸಂದರ್ಭದಲ್ಲಿ ಸಾರ್ವಜನಿಕ ನೀತಿ ಮತ್ತು ಆಡಳಿತದಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡರು. ನಂತರದಲ್ಲಿ ಸಮಾಜ ಸೇವೆಯಲ್ಲಿ ಸಕ್ರಿಯರಾಗಿದ್ದುಕೊಂಡು ಸ್ಥಳೀಯ ಜನರ ಮೆಚ್ಚುಗೆಗೆ ಪಾತ್ರರಾದ ನಾಯಕಿಯಾಗಿ ಹೆಸರಾದರು. ಆಂಧ್ರಪ್ರದೇಶದ ಅಂದಿನ ಸಿಎಂ ಚಂದ್ರಬಾಬು ನಾಯ್ಡು 2004ರ ಚುನಾವಣೆಯಲ್ಲಿ ಸೀತಕ್ಕನವರಿಗೆ ಮುಲುಗು ಕ್ಷೇತ್ರದ ಟಿಡಿಪಿ ಟಿಕೆಟ್ ನೀಡಿದರು.