ಚಂಡೀಗಢ: ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಕೃಷಿ ಕಾನೂನುಗಳ ವಿರುದ್ಧ ರೈತರು ದೆಹಲಿ, ಪಂಜಾಬ್ ಗಡಿ ಪ್ರದೇಶಗಳಲ್ಲಿ ಸುದೀರ್ಘ ಹೋರಾಟ ನಡೆಸಿದ್ದರು. ಆ ವೇಳೆ ಪ್ರಾಣ ಕಳೆದುಕೊಂಡ ರೈತರ ಕುಟುಂಬಗಳಿಗೆ ಇಂದು ಚಂಡೀಗಢದಲ್ಲಿ ತೆಲಂಗಾಣ ಸಿಎಂ ಕೆಸಿಆರ್ 3 ಲಕ್ಷ ರೂ ಮೌಲ್ಯದ ಪರಿಹಾರದ ಚೆಕ್ ವಿತರಿಸಲಿದ್ದಾರೆ.
ಚಂಡೀಗಢದ ಟ್ಯಾಗೋರ್ ರಂಗಮಂದಿರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಚಂದ್ರಶೇಖರ್ ರಾವ್ ಭಾಗಿಯಾಗುವರು. ಅವರೊಂದಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಕೂಡ ಇರಲಿದ್ದಾರೆ. ರೈತರ ಆಂದೋಲನದ ಸಮಯದಲ್ಲಿ ಪಂಜಾಬ್‌ನ 600 ರೈತರು ಮೃತಪಟ್ಟಿದ್ದರು ಎನ್ನಲಾಗಿದೆ.
ದಿನದಿಂದ ದಿನಕ್ಕೆ ರೈತರ ಹೋರಾಟದ ಕಾವು ಹೆಚ್ಚಾದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂಪಡೆದಿದ್ದರು. ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದ ಮರುದಿನವೇ ತೆಲಂಗಾಣ ಮುಖ್ಯಮಂತ್ರಿ ಮೃತ ರೈತರ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದ್ದರು. ಪಂಜಾಬ್ ಸರ್ಕಾರ ಈಗಾಗಲೇ ಮೃತರ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ ಮತ್ತು 5 ಲಕ್ಷ ರೂಪಾಯಿ ಪರಿಹಾರ ನೀಡಿದೆ.
ಜಿಲ್ಲಾ ಕೃಷಿ ಅಧಿಕಾರಿಗಳಿಗೆ ಸೂಚನೆ: ಕಿಸಾನ್ ಆಂದೋಲನದ ವೇಳೆ ಪ್ರಾಣ ಕಳೆದುಕೊಂಡ ರೈತರ ಕುಟುಂಬಗಳನ್ನು ಇಂದು ಟ್ಯಾಗೋರ್ ರಂಗಮಂದಿರಕ್ಕೆ ಕರೆತರುವಂತೆ ರಾಜ್ಯ ಕೃಷಿ ಇಲಾಖೆ ಎಲ್ಲ ಜಿಲ್ಲೆಗಳ ಕೃಷಿ ಅಧಿಕಾರಿಗಳಿಗೆ ಸೂಚಿಸಿದೆ. ಪಂಜಾಬ್‌ನ ಮೃತ ರೈತರ ಕುಟುಂಬಕ್ಕೆ ಬೇರೆ ರಾಜ್ಯದ ಮುಖ್ಯಮಂತ್ರಿ ಇಷ್ಟು ದೊಡ್ಡ ಮೊತ್ತದ ಪರಿಹಾರ ನೀಡಿರುವುದು ಇದೇ ಮೊದಲು.
ಇದನ್ನೂ ಓದಿ:ಪೆಟ್ರೋಲ್-ಡೀಸೆಲ್ ಸುಂಕ ಇಳಿಕೆ ಕುರಿತು ಪರಿಶೀಲನೆ: ಸಿಎಂ ಬೊಮ್ಮಾಯಿ