ಹೈದರಾಬಾದ್ (ತೆಲಂಗಾಣ): ಸೊಂಟದ ಶಸ್ತ್ರಚಿಕಿತ್ಸೆಯ ನಂತರ ಚೇತರಿಸಿಕೊಳ್ಳುತ್ತಿರುವ ಬಿಆರ್‌ಎಸ್ ಮುಖ್ಯಸ್ಥ ಮತ್ತು ಮಾಜಿ ಸಿಎಂ ಕಲ್ವಕುಂಟ್ಲ ಚಂದ್ರಶೇಖರ್ ರಾವ್ ಅವರನ್ನು ತೆಲಂಗಾಣ ನೂತನ ಮುಖ್ಯಮಂತ್ರಿ ರೇವಂತ್ ರೆಡ್ಡಿ ಇಂದು ಇಲ್ಲಿಯ ಆಸ್ಪತ್ರೆಯಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಈ ಕುರಿತು ರೇವಂತ್ ರೆಡ್ಡಿ ಅವರು ಕೆಸಿಆರ್ ಅವರನ್ನು ಭೇಟಿಯಾಗಿರುವ ಫೋಟೋವನ್ನು ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪೋಸ್ಟ್ ಮಾಡಿ, ಕೆಸಿಆರ್ ಅವರ ಯೋಗಕ್ಷೇಮ ವಿಚಾರಿಸಿರುವುದಾಗಿ ತಿಳಿಸಿದ್ದಾರೆ.
ತೆಲಂಗಾಣ ವಿಧಾನಸಭಾ ಚುನಾವಣಾ ಫಲಿತಾಂಶಗಳ ನಂತರ, ಕೆಸಿಆರ್ ಅವರು ಡಿಸೆಂಬರ್ 7 ರಂದು ಹೈದರಾಬಾದ್‌ನಲ್ಲಿರುವ ತಮ್ಮ ಫಾರ್ಮ್‌ಹೌಸ್‌ನಲ್ಲಿ ಜಾರಿ ಬಿದ್ದಿದ್ದರು. ನಂತರ ಅವರನ್ನು ಚಿಕಿತ್ಸೆಗೆಂದು ನಗರದ ಯಶೋಧ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಿಟಿ ಸ್ಕ್ಯಾನ್ ಸೇರಿದಂತೆ ಇತರೆ ಪರೀಕ್ಷೆಗಳಲ್ಲಿ, ಮಾಜಿ ಸಿಎಂಗೆ ಎಡ ಚೆಪ್ಪೆಯ ಮೂಳೆ ಮುರಿತ (ಇಂಟ್ರಾಕ್ಯಾಪ್ಸುಲರ್ ನೆಕ್ ಆಫ್ ಫೆಮರ್ ಫ್ರಾಕ್ಚರ್) ಆಗಿರುವುದು ಕಂಡುಬಂದಿದೆ ಎಂದು ಆಸ್ಪತ್ರೆ ತಿಳಿಸಿತ್ತು. ಬಳಿಕ ಅವರು ಹಿಪ್ ಬದಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಕುರಿತು ಕೆಸಿಆರ್ ಅವರ ಪುತ್ರ ಕೆ ಟಿ ರಾಮರಾವ್ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿ, ಕೆಸಿಆರ್ ಅವರು ಸ್ನಾನಗೃಹದಲ್ಲಿ ಜಾರಿ ಬಿದಿದ್ದರು, ಹೀಗಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ತಿಳಿಸಿದ್ದರು.